ನವದೆಹಲಿ, ಡಿ.17 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ್ದ ಸಿಖ್ ಧರ್ಮಗುರುವೊಬ್ಬರು ಸಿಂಘು ಗಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕರ್ನಾಲ್ ಜಿಲ್ಲೆಯ ನಿಸ್ಸಿಂಗ್ ಪ್ರದೇಶದ ಸಿಂಗ್ರಾ ಗ್ರಾಮದ ಸಂತ ರಾಮ್ ಸಿಂಗ್ (65) ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ರಾಮ್ ಸಿಂಗ್ ಅವರು ಬರೆದಿದ್ ಕೈಬರಹದ ಟಿಪ್ಪಣಿಯೊಂದು ಸಿಕ್ಕಿದ್ದು, ಅದರಲ್ಲಿ ರೈತರ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆಯಲಾಗಿದೆ. ಈ ಪತ್ರವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸೋನಿಪೇಟ್ ಠಾಣೆ ಪೊಲೀಸ್ ಅಧಿಕಾರಿ, "ರಾಮ್ ಸಿಂಗ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನಮಗೆ ಬುಧವಾರ ಫೋನ್ ಕರೆಯೊಂದು ಬಂದಿದ್ದು, ಅವರನ್ನು ಪಾಣಿಪತ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದ್ದಾರೆ.