ಮೈಸೂರು, ಡಿ.17 (DaijiworldNews/HR): ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಜೆಡಿಎಸ್ ಒಂದು ಮಗುವಿದ್ದಂತೆ, ಯಾರು ಮಿಠಾಯಿ ತೋರಿಸುತ್ತಾರೋ ಅವರ ಬಳಿ ಹೋಗುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತು ವಿಧಾನಪರಿಷತ್ತಿನಲ್ಲಿ ಜೆಡಿಎಸ್ ಪಕ್ಷ ಬಿಜೆಪಿಗೆ ಬೆಂಬಲ ನೀಡಿದ್ದರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಜೆಡಿಎಸ್ ಪಕ್ಷವು ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವೆ ಒಂದು ಪುಟ್ಟ ಮಗುವಿದಂತೆ ಹಾಗಾಗಿ ಯಾರು ಮಿಠಾಯಿ ತೋರಿಸುತ್ತಾರೋ ಅವರ ಬಳಿ ಹೋಗುತ್ತದೆ" ಎಂದರು.
ಇನ್ನು ಪರಿಷತ್ನಲ್ಲಿ ನಡೆದ ಕಲಪದ ಕುರಿತು ಮಾತನಾಡಿದ ಅವರು, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನಪರಿಷತ್ತಿಗೆ ವಿಶೇಷವಾದ ಸ್ಥಾನ ಇದೆ, ಆದರೆ ಮೇಲ್ಮನೆಯ ಗೌರವವನ್ನು ನಾವೆಲ್ಲರೂ ಸೇರಿ ಬೀದಿಪಾಲು ಮಾಡಿದೆವು. ನಾನು ಕೂಡ ಸದನದಲ್ಲಿ ಕುಳಿತು ಇದೆಲ್ಲವನ್ನೂ ವೇದನೆಯಿಂದ ನೋಡಬೇಕಾಯಿತು. ಜನತಂತ್ರ ವ್ಯವಸ್ಥೆಯ ದೇವಾಲಯದ ಬಾಗಿಲನ್ನು ಬೂಟಿನಿಂದ ಒದ್ದದ್ದು ನೋವಿನ ಸಂಗತಿ. ಪ್ರಜಾಪ್ರಭುತ್ವವನ್ನು ನೀಡಿರುವ ಭಾರತಾಂಬೆ ಮತ್ತು ಅಧಿಕಾರ ಕೊಟ್ಟಂತಹ ಜನರು ನಮ್ಮನ್ನು ಕ್ಷಮಿಸಬೇಕು" ಎಂದು ಹೇಳಿದ್ದಾರೆ.