ಬೆಂಗಳೂರು, ಡಿ.16 (DaijiworldNews/PY): "ಸಭಾಪತಿ ವಿಚಾರವಾಗಿ ಮುಂದೆ ಏನು ಮಾಡಬೇಕು ಎನ್ನುವುದನ್ನು ಕಾನೂನು ಸಚಿವರು ಹಾಗೂ ಇತರರೊಂದಿಗೆ ಚರ್ಚೆ ಮಾಡಿ ಬಳಿಕ ಸೂಕ್ತವಾದ ನಿರ್ಧಾರ ಕೈಗೊಳುತ್ತೇನೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಭಾಪತಿ ಬಗ್ಗೆ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು" ಎಂದಿದ್ದಾರೆ.
ಪರಿಷತ್ನಲ್ಲಿ ಮಂಗಳವಾರ ನಡೆದ ಘಟನೆಯ ನಂತರ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿದ್ದು, ದೂರು ನೀಡಿದ್ದಾರೆ. ಆದರೆ, ಈ ವಿಚಾರವಾಗಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಸದ್ಯಕ್ಕೆ ರಾಜೀನಾಮೆ ನೀಡಬೇಡಿ. ಈ ವಿಚಾರವಾಗಿ ರಾಜ್ಯಪಾಲರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ನೋಡೋಣ. ಒಂದು ವೇಳೆ ಬಿಜೆಪಿ ಕಾನೂನು ಹೋರಾಟಕ್ಕೆ ಮುಂದಾದಲ್ಲಿ ನಾವು ಕೂಡಾ ಅದೇ ರೀತಿ ಮಾಡುವ ಬಗ್ಗೆ ಯೋಚನೆ ಮಾಡೋಣ ಎಂದು ಕೈ ನಾಯಕರು ಸಭಾಪತಿಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಈ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿವೆ. ಈ ವಿಚಾರವನ್ನು ಸುಲಭವಾಗಿ ಬಿಟ್ಟು ಬಿಡುವುದು ಬೇಡ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.
ಪರಿಷತ್ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮಾತನಾಡಿ, "ಕಾಂಗ್ರೆಸ್ ಅನ್ನು ಕೆಟ್ಟದಾಗಿ ಬಿಂಬಿಸುವ ಸಲುವಾಗಿ ಈ ಪ್ರಯತ್ನ ಮಾಡಿದ್ದಾರೆ. ಇದು ಬಿಜೆಪಿ ಹಾಗೂ ಜೆಡಿಎಸ್ನವರು ಮಾಡಿದ ಉಪಾಯವಾಗಿದೆ" ಎಂದಿದ್ದಾರೆ.