ಮೈಸೂರು, ಡಿ.16 (DaijiworldNews/PY): "ಕಾಂಗ್ರೆಸ್ಗೆ ಮಾನ-ಮರ್ಯಾದೆ ಇದ್ದಲ್ಲಿ ಗೂಂಡಾಗಿರಿ ಮಾಡಿದ ಪರಿಷತ್ ಸದಸ್ಯರನ್ನು ಅಮಾನತು ಮಾಡಬೇಕು" ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಒತ್ತಾಯಿಸಿದ್ದಾರೆ.
"ಇದು ಕಾಂಗ್ರೆಸ್ನವರ ಪೂರ್ವನಿಯೋಜಿತ ಸಂಚಾಗಿದ್ದು, ಪಕ್ಷದ ಸಭೆಯ ವೇಳೆಯೇ ಗೂಂಡಾಗಿರಿ ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ಉಪಸಭಾಪತಿಯವರನ್ನು ಬಲತ್ಕಾರವಾಗಿ ಖುರ್ಚಿಯಿಂದ ಎಳೆದಾಡಿದ್ದು ನಿಜಕ್ಕೂ ಖಂಡನೀಯ. ಇದರಿಂದ ಕಾಂಗ್ರೆಸ್ನವರ ಸಂಸ್ಕೃತಿ ಏನು ಎಂದು ತಿಳಿಯುತ್ತದೆ" ಎಂದು ಆರೋಪಿಸಿದ್ದಾರೆ.
"ಸಭಾಪತಿ ಖುರ್ಚಿಗೆ ಅದರದ್ದೇ ಆದಂತಹ ಸ್ಥಾನಮಾನ, ಗೌರವವಿದೆ. ನಮ್ಮ ಪಕ್ಷದ ಸದಸ್ಯರು ಸಭಾಪತಿ ಮೇಲೆ ಅವಿಶ್ವಾಸ ಮಂಡನೆ ಮಾಡಿರುವ ವಿಚಾರದ ಸಿದ್ದರಾಮ್ಯಯ ಅವರಿಗೆ ತಿಳಿದಿರಲಿಲ್ಲವೇ?. ಅವರು ಎಲ್ಲರಿಗೂ ಕೂಡಾ ನೀತಿ, ಕಾನೂನು ಬಗ್ಗೆ ತಿಳಿ ಹೇಳುತ್ತಾರೆ. ಆದರೆ, ತಮ್ಮ ಪಕ್ಷದ ನಾಯಕರಿಗೆ ಮೊದಲು ಬುದ್ಧಿ ಹೇಳಬೇಕು" ಎಂದಿದ್ದಾರೆ.
"ಜೆಡಿಎಸ್ ಹಾಗು ಬಿಜೆಪಿ ಒಟ್ಟಾಗಿರುವ ಕಾರಣ, ಕಾಂಗ್ರೆಸ್ಗೆ ಸಂಖ್ಯಾಬಲವಿಲ್ಲ. ಈ ವೇಳೆ ಸಭಾಪತಿ ಅವರು ತಮ್ಮ ಸ್ಥಾನವನ್ನು ಬಿಟ್ಟು ಚರ್ಚೆ ಮಾಡಲು ಅವಕಾಶ ನೀಡಬೇಕಿತ್ತು. ಆದರೆ, ಅವರು ಏಕಾಏಕಿ ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಿದ್ದು ಸೂಕ್ತವಲ್ಲ" ಎಂದು ಹೇಳಿದ್ದಾರೆ.
"ವಿಧಾನ ಪರಿಷತ್ ಅನ್ನು ರದ್ದು ಪಡಿಸುವುದಿಲ್ಲ. ಈ ರೀತಿಯಾದ ಯಾವುದೇ ಪ್ರಸ್ತಾವನೆಯೂ ಕೂಡಾ ಸರ್ಕಾರದ ಮುಂದಿಲ್ಲ. ಆದರೆ, ಈ ರೀತಿಯಾಗಿದ್ದು ಎಲ್ಲರೂ ಕೂಡಾ ತಲೆ ತಗ್ಗಿಸುವಂತಾಗಿದೆ" ಎಂದಿದ್ದಾರೆ.