ಮುಂಬೈ, ಡಿ.16 (DaijiworldNews/MB) : ಓಂ ರಾವತ್ ನಿರ್ದೇಶನದ ಆದಿಪುರುಷ್ ಸಿನಿಮಾಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನನ್ನು ಮಾನವೀಯ ಗುಣವುಳ್ಳವನು ಎಂದು ಕರೆದ ವಿಚಾರಕ್ಕೆ ಸಂಬಂಧಿಸಿ ಸೈಫ್ ಅಲಿ ಖಾನ್ ವಿರುದ್ಧ ಉತ್ತರಪ್ರದೇಶದ ಜೌನ್ಪುರದ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಡಿಸೆಂಬರ್ 6 ರಂದು ಸೈಫ್ ತಮ್ಮ ಸಂದರ್ಶನವೊಂದರಲ್ಲಿ ರಾವಣ ತನ್ನ ತಂಗಿ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸಿದ ಎಂಬ ಕೋಪಕ್ಕೆ ಸೀತೆಯನ್ನು ಅಪಹರಿಸಿದ ಎಂದು ರಾವಣನ ಪರವಾಗಿ ಮಾತನಾಡಿದ್ದರು. ಸಂದರ್ಶನದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೈಫ್ ಅಲಿ ಖಾನ್ ಹೇಳಿಕೆ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಸೈಫ್ ತನ್ನ ಹೇಳಿಕೆಗೆ ಕ್ಷಮೆ ಕೇಳಿದ್ದರು. ಆದರೆ ಈಗ ಸೈಫ್ ವಿರುದ್ದ ದೂರು ದಾಖಲಾಗಿದೆ. ಈ ಪ್ರಕರಣವು ಎಸಿಜೆಎಂ ನ್ಯಾಯಾಲಯದಲ್ಲಿದ್ದು ಡಿಸೆಂಬರ್ 23 ಅನ್ನು ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ರಾಮಾಯಣವನ್ನು ಆಧರಿಸಿದ ಆದಿಪುರುಷ್ನಲ್ಲಿ ಸೈಫ್ ಲಂಕೇಶನಾಗಿ ನಟಿಸಿದ್ದು ದಕ್ಷಿಣದ ಖ್ಯಾತ ನಟ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.