ನವದೆಹಲಿ, ಡಿ.16 (DaijiworldNews/PY): ದೆಹಲಿಯಲ್ಲಿ ನಡೆದ ನಿರ್ಭಯಾ ಮೇಲಿನ ಅತ್ಯಾಚಾರದ ಕೃತ್ಯವನ್ನು ನೆನೆಸಿಕೊಂಡಿರುವ ನಿರ್ಭಯಾ ತಾಯಿ ಆಶಾ ದೇವಿ, "ಎಲ್ಲಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ನಾನು ಹೋರಾಟವನ್ನು ಮುಂದುರೆಸುತ್ತೇನೆ" ಎಂದಿದ್ದಾರೆ.
"ನ್ಯಾಯ ಸಿಗಲು ಎಂಟು ವರ್ಷ ಬೇಕಾಯಿತು. ನ್ಯಾಯ ಸಿಗಲು ಏಕೆ ಇಷ್ಟು ತಡವಾಯಿತು?. ವಿಚಾರವನ್ನು ಸರ್ಕಾರ ಹಾಗೂ ನ್ಯಾಯಾಲಯ ಗಂಭೀರವಾಗಿ ತೆಗೆದುಕೊಳ್ಳಬೇಕು. ಅಲ್ಲದೇ, ನ್ಯಾಯವನ್ನು ತುರ್ತಾಗಿ ದೊರಕಿಸಿಕೊಡುವ ಸಲುವಾಗಿ ಕಾನೂನುಗಳನ್ನು ಪುನರ್ ವಿಮರ್ಶೆ ಮಾಡಬೇಕು" ಎಂದು ತಿಳಿಸಿದ್ದಾರೆ.
"ನನ್ನ ಮಗಳಿಗೆ ನ್ಯಾಯ ದೊರಕಿದೆ. ಆದರೆ, ಇದರ ಅರ್ಥ ನಾನು ಮೌನವಾಗಿವಾಗಿರುತ್ತೇನೆ ಎಂದಲ್ಲ. ಬದಲಾಗಿ ಎಲ್ಲಾ ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುವ ಸಲುವಾಗಿ ನಾನು ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ದೇಶದಲ್ಲಿ ಇಂತಹ ಸ್ಥಿತಿ ಎಂದಿಗೂ ಮರುಕಳಿಸಬಾರದು" ಎಂದು ಹೇಳಿದ್ದಾರೆ.
2012ರ ಡಿಸೆಂಬರ್ 16ರ ರಾತ್ರಿ ದೆಹಲಿಯ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರವೆಸಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸುದೀರ್ಘವಾದ ವಿಚಾರಣೆಯ ನಂತರ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಲಾಗಿತ್ತು.