ನವದೆಹಲಿ, ಡಿ.16 (DaijiworldNews/MB) : 1971 ರ ಭಾರತ-ಪಾಕಿಸ್ತಾನ ಯುದ್ದ ನಡೆದು ಇಂದಿಗೆ 50 ನೇ ವರ್ಷ ಸಂದಿದ್ದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವರ್ಣಿಮ್ ವಿಜಯ್ ಮಾಷಲ್ ಜ್ಯೋತಿಯನ್ನು ಬೆಳಗಿದರು. ಈ ಮೂಲಕ ಸ್ವರ್ಣಿಮ್ ವಿಜಯ ವರ್ಷ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
ಇದಕ್ಕೂ ಮುನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರ ಯುದ್ಧ ಸ್ಮಾರಕಕ್ಕೆ ಆಗಮಿಸಿ ಸ್ವರ್ಣಿಮ್ ವಿಜಯ ದಿವಸದ ಲಾಂಛನವನ್ನು ಬಿಡುಗಡೆ ಮಾಡಿದರು.
1971 ರ ಡಿಸೆಂಬರ್ನಲ್ಲಿ, ಭಾರತೀಯ ಸಶಸ್ತ್ರ ಪಡೆ ಪಾಕಿಸ್ತಾನ ಸೇನೆಯ ವಿರುದ್ಧ ನಿರ್ಣಾಯಕ ಮತ್ತು ಐತಿಹಾಸಿಕ ವಿಜಯವನ್ನು ಗಳಿಸಿತು. 1971ರ ಡಿಸೆಂಬರ್ 16ರಂದು (ಈ ದಿನದಂದು), ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಎಎ ಖಾನ್ ನಿಯಾಜಿ ಮತ್ತು 93 ಸಾವಿರ ಸೈನಿಕರು ಭಾರತೀಯ ಸೇನೆ ಮತ್ತು ಮುಕ್ತಿ ಬಹಿನಿ ಒಳಗೊಂಡ ಮಿತ್ರ ಪಡೆಗಳಿಗೆ ಬೇಷರತ್ತಾಗಿ ಶರಣಾಗಿದ್ದರು. ಯುದ್ಧದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾದೇಶ ಜನ್ಮತಳೆದಿತ್ತು.