ಬೆಂಗಳೂರು, ಡಿ.16 (DaijiworldNews/MB) : ತಮ್ಮನ್ನು ತಾವೇ ಬಂಡವಾಳಶಾಹಿಗಳಿಗೆ ಅರ್ಪಿಸಿಕೊಂಡಿರುವ ಮೋದಿಯವರಿಂದ ಈ ಪ್ರತಿಕ್ರಿಯೆ ನಿರೀಕ್ಷಿತ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಗುಜರಾತ್ನ ಧೋರ್ಡೊದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು ''ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷಗಳು ರಾಜಕೀಯ ಲಾಭಕ್ಕಾಗಿ ರೈತರ ದಾರಿತಪ್ಪಿಸುತ್ತಿದೆ'' ಎಂದು ಹೇಳಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ನರೇಂದ್ರ ಮೋದಿ ವಿರುದ್ದ ಟ್ವೀಟ್ ಮೂಲಕ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್, ''ತಮ್ಮನ್ನು ತಾವೇ ಬಂಡವಾಳಶಾಹಿಗಳಿಗೆ ಅರ್ಪಿಸಿಕೊಂಡಿರುವ ಮೋದಿಯವರಿಂದ ಈ ಪ್ರತಿಕ್ರಿಯೆ ನಿರೀಕ್ಷಿತ. ಕರಾಳ ಕೃಷಿ ಕಾಯ್ಧೆ ರದ್ದು ಮಾಡುವುದಿಲ್ಲ ಎಂಬ ಹೇಳಿಕೆಯ ಹಿಂದೆ ಕಾರ್ಪೋರೇಟ್ ಹಿತಾಸಕ್ತಿ ಅಡಗಿದೆ. ತಮ್ಮದು ರೈತ ಸರ್ಕಾರ ಎಂಬ ಬೂಟಾಟಿಕೆ ಬಿಟ್ಟು ಬಂಡವಾಳಶಾಹಿಗಳ ಕೃಪಾಪೋಷಿತ ಸರ್ಕಾರ ಎಂಬುದನ್ನು ಒಪ್ಪಿಕೊಳ್ಳಲಿ'' ಎಂದು ಟೀಕಿಸಿದ್ದಾರೆ.