ನವದೆಹಲಿ, ಡಿ.16 (DaijiworldNews/MB) : ಕಳೆದ 21 ದಿನಗಳಿಂದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಲ್ಲಿದ್ದು ಈ ಪ್ರತಿಭಟನೆಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಬೆಳಗ್ಗೆ ಅತ್ಯಂತ ಕನಿಷ್ಠ ತಾಪಮಾನ 4.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
''ಚಳಿಗಾಲ ಆರಂಭವಾಗಿರುವಂತೆಯೇ ದೆಹಲಿಯಲ್ಲಿ ತೀವ್ರ ಚಳಿ ಶುರುವಾಗಿದ್ದು ವಿಪರೀತ ಚಳಿಯನ್ನು ಲೆಕ್ಕಿಸದೇ ಟಿಕ್ರಿ ಹಾಗೂ ಸಿಂಘು ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರು ಸಾವನ್ನಪ್ಪಿದ್ದಾರೆ. ಈ ಕಾಯ್ದೆಗಳು ರೈತರಿಗೆ ಯಾವುದೇ ಪ್ರಯೋಜನವನ್ನು ಉಂಟು ಮಾಡುವುದಿಲ್ಲ. ಬದಲಾಗಿ ಕಾರ್ಪೋರೇಟ್ ವಲಯಕ್ಕೆ ಪ್ರಯೋಜನವನ್ನು ಉಂಟು ಮಾಡುತ್ತದೆ'' ಎಂದು ಹೇಳಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ''ಈ ಚಳಿಯಲ್ಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ರೈತರ ಯಾವುದೇ ಧನಿಗೆ ಕಿವಿಗೊಡುತ್ತಿಲ್ಲ. ನಿಜಕ್ಕೂ ಇದು ಆತಂಕಕಾರಿ ವಿಚಾರ'' ಎಂದು ಹೇಳಿದ್ದಾರೆ.