ಚಂಡೀಗಢ, ಡಿ.16 (DaijiworldNews/MB) : ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರವಾಗಿ ಮಂಗಳವಾರ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಸ್ಎಡಿ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ "ಕೇಸರಿ ಪಕ್ಷವೇ ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್" ಎಂದು ಹೇಳಿದ್ದಾರೆ.
''ಬಿಜೆಪಿ ನೇತೃತ್ವದ ಸರ್ಕಾರ ತನ್ನ 'ಅಹಂ' ಅನ್ನು ಬದಿಗಿಟ್ಟು ಪ್ರತಿಭಟನೆ ನಡೆಸುತ್ತಿರುವ ರೈತರ ಮಾತುಗಳನ್ನು ಕೇಳಬೇಕು'' ಎಂದು ಒತ್ತಾಯಿಸಿರುವ ಅವರು, ''ಬಿಜೆಪಿ ಪಂಜಾಬ್ನಲ್ಲಿ ಸಿಖ್ಖರ ವಿರುದ್ಧ ಹಿಂದೂಗಳನ್ನು ಎತ್ತಿ ಕಟ್ಟುತ್ತಿದೆ'' ಎಂದು ಆರೋಪಿಸಿದರು.
''ಬಿಜೆಪಿಯು ಮೊದಲು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಿತು. ಈಗ ಶಾಂತಿ ಪ್ರಿಯ ಪಂಜಾಬಿ ಹಿಂದೂಗಳನ್ನು ಸಿಖ್ ಸಹೋದರರ ವಿರುದ್ಧ ಎತ್ತಿಕಟ್ಟುವ ಯತ್ನ ಮಾಡುತ್ತಿದೆ'' ಎಂದು ದೂರಿದರು.
''ಯಾರಾದರು ಕೇಂದ್ರ ಸರ್ಕಾರದ ಪರವಾಗಿ ಮಾತನಾಡಿದರೆ ಅವರನ್ನು 'ದೇಶಭಕ್ತ' ಎಂದು ಕರೆಯಲಾಗುವುದು, ಸರ್ಕಾರದ ವಿರುದ್ಧ ಮಾತನಾಡಿದರೆ ಅವರನ್ನು "ತುಕ್ಡೆ ತುಕ್ಡೆ ಗ್ಯಾಂಗ್" ಎಂದು ಬ್ರಾಂಡ್ ಮಾಡಲಾಗುತ್ತಿದೆ. ಆದರೆ ನಿಜವಾಗಿ ಬಿಜೆಪಿಯೇ ದೇಶದ ತುಕ್ಡೆ ತುಕ್ಡೆ ಗ್ಯಾಂಗ್. ಬಿಜೆಪಿ ರಾಷ್ಟ್ರೀಯ ಐಕ್ಯತೆಯನ್ನು ಒಡೆಯುತ್ತಿದೆ'' ಎಂದು ಕಿಡಿಕಾರಿದರು.
ಕೃಷಿ ಕಾನೂನು ವಿಚಾರದಲ್ಲಿ ಎನ್ ಡಿಎ ಮೈತ್ರಿಕೂಟದಿಂದ ಎಸ್ಎಡಿ ಹೊರ ಬಂದಿದೆ. ಮೋದಿ ಸಂಪುಟದಲ್ಲಿ ಸಚಿವೆಯಾಗಿದ್ದ ಎಸ್ಎಡಿ ನಾಯಕಿ ಹರ್ಸಿಮ್ರತ್ ಕೌರ್ ಬಾದಲ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.