ಬೆಂಗಳೂರು, ಡಿ.16 (DaijiworldNews/MB) : ಮಂಗಳವಾರ ವಿಧಾನಪರಿಷತ್ನಲ್ಲಿ ಹೈಡ್ರಾಮಾ ನಡೆದಿದೆ. ಸಭಾಪತಿ ಪೀಠಕ್ಕೆ ಬರುವ ಮೊದಲೇ ಉಪಸಭಾಪತಿ ಧರ್ಮೇಗೌಡ ಅವರು ಪೀಠದಲ್ಲಿ ಬಂದು ಕುಳಿತಿದ್ದಾರೆ. ಈ ವಿಚಾರವಾಗಿ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ವಿಪಕ್ಷ ಮುಖಂಡ ಸಿದ್ದರಾಮಯ್ಯ, ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಮೋದಿ ಪ್ರಜಾಪ್ರಭುತ್ವ ಎಂದು ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ವಿಧಾನಪರಿಷತ್ ನಲ್ಲಿ ಬಿಜೆಪಿ ಸಚಿವರು ಮತ್ತು ಸದಸ್ಯರಿಂದ ನಡೆದಿರುವ ಗೂಂಡಾಗಿರಿ ರಾಜ್ಯದ ಮಾತ್ರವಲ್ಲ, ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಇದು ನರೇಂದ್ರ ಮೋದಿ ಪ್ರಜಾಪ್ರಭುತ್ವ'' ಎಂದು ಟೀಕಿಸಿದ್ದಾರೆ.
''ವಿಧಾನಪರಿಷತ್ ಸಭಾಪತಿಗಳನ್ನು ಅವರ ಕಚೇರಿಯಲ್ಲಿ ಬಲತ್ಕಾರದಿಂದ ಕೂಡಿಹಾಕಿ, ಅವರ ಅನುಮತಿ ಇಲ್ಲದೆ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡಹಗಲೇ ಸಂವಿಂಧಾನಕ್ಕೆ ಅಪಚಾರ ಎಸಗಿದ್ದಾರೆ, ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರೆ'' ಎಂದು ಆರೋಪಿಸಿದ್ದಾರೆ.
''ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಡೆಸಲು ಸರ್ವಸಮ್ಮತಿಯಿಂದ ರಚಿಸಲಾದ ನಿಯಮಾವಳಿಗಳಿವೆ. ಬಿಜೆಪಿ ಸದಸ್ಯರ ಇಂದಿನ ನಡವಳಿಕೆ ಆ ನಿಯಮಾಳಿಗಳಿಗೆ ಅನುಗುಣವಾಗಿತ್ತೇ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರಾಜ್ಯದ ಜನತೆಗೆ ತಿಳಿಸಬೇಕು'' ಎಂದು ಹೇಳಿದ್ದಾರೆ.
''ವಿಧಾನ ಪರಿಷತ್ ಸಭಾಪತಿ, ವಿದೇಶ ಪ್ರವಾಸ,ಅನಾರೋಗ್ಯ ಇಲ್ಲವೇ ಇನ್ನುಯಾವುದೋ ಕಾರಣಕ್ಕೋ ಕರ್ತವ್ಯನಿರ್ವಹಣೆ ಮಾಡಲು ಸಾಧ್ಯವಾಗದೆ ಇದ್ದಾಗ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅವರು ಉಪಸಭಾಪತಿಯವರಿಗೆ ಅವಕಾಶವನ್ನು ನೀಡಬಹುದೆಂದು ಸದನದ ನಿಯಮಾವಳಿ ಹೇಳಿದೆ. ಇದರ ಪಾಲನೆಯಾಗಿದೆಯೇ?'' ಎಂದು ಪ್ರಶ್ನಿಸಿದ್ದಾರೆ.
''ಬಿಜೆಪಿ ವಿಧಾನಪರಿಷತ್ ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ನೋಟೀಸ್ ನೀಡಿದ್ದರು. ನಿಯಮಾವಳಿ ಪ್ರಕಾರ ಅದರ ಇತ್ಯರ್ಥಕ್ಕೆ 14 ದಿನಗಳ ಕಾಲಾವಕಾಶ ಇದೆ. ಆದರೆ ನೋಟೀಸ್ ಕ್ರಮಬದ್ದವಾಗಿಲ್ಲ ಎಂದು ಸಭಾಪತಿಯವರು ತಿರಸ್ಕರಿಸಿದ್ದ ಕಾರಣ ಆ ವಿಷಯ ಇಂದಿನ ಅಜೆಂಡಾದಲ್ಲಿ ಇರಲಿಲ್ಲ'' ಎಂದು ಹೇಳಿದ್ದಾರೆ.
''ಅವಿಶ್ವಾಸ ನಿರ್ಣಯ ಅಜೆಂಡಾದಲ್ಲಿ ಸೇರ್ಪಡೆಯಾದ ನಂತರ ಸದನದಲ್ಲಿ ಅದನ್ನು ಕನಿಷ್ಠ ಹತ್ತು ಜನ ಯಾವುದೇ ಚರ್ಚೆ ಇಲ್ಲದೆ ಬೆಂಬಲಿಸಬೇಕು. ಅದರ ಆಧಾರದಲ್ಲಿ ಮುಂದಿನ ಐದು ದಿನಗಳೊಳಗೆ ನಿರ್ಣಯದ ಚರ್ಚೆಗೆ ಸಭಾಪತಿಗಳು ದಿನ ಗೊತ್ತುಪಡಿಸಬೇಕು. ಈ ನಿಯಮ ಪಾಲನೆಯಾಗಿದೆಯೇ?'' ಎಂದು ಪ್ರಶ್ನಿಸಿದ್ದಾರೆ.
''ಬಿಜೆಪಿ ಸದಸ್ಯರ ಅವಿಶ್ವಾಸ ನಿರ್ಣಯದ ನೊಟೀಸ್ ಸಭಾಪತಿಯವರಿಂದ ತಿರಸ್ಕೃತಗೊಂಡಿದೆ ಮತ್ತು ಅಜೆಂಡಾದಲ್ಲಿಯೂ ಇರಲಿಲ್ಲ. ಹೀಗಿದ್ದಾಗ ಅವರೇ ಉಪಸಭಾಪತಿಯವರನ್ನು ಅಕ್ರಮವಾಗಿ ಪೀಠದಲ್ಲಿ ಕೂರಿಸಿ ತಾವೇ ನಿರ್ಧರಿಸಿದ ಅಜೆಂಡಾ ಮೂಲಕ ಕಲಾಪ ನಡೆಸಲು ಇದೇನು ಬನಾನ ರಿಪಬ್ಲಿಕಾ?'' ಎಂದು ಟೀಕಿಸಿದ್ದಾರೆ.
''ವಿಧಾನಪರಿಷತ್ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಖಾತೆಯ ಕಾರ್ಯದರ್ಶಿಗಳು ಸಭಾಪತಿಯವರಿಗೆ ನೇರವಾಗಿ ಪತ್ರಬರೆದಿದ್ದೇ ಅಕ್ರಮ ನಡವಳಿಕೆ. ಹೀಗಿದ್ದರೂ ಸಭಾಪತಿಗಳು ಸಂಘರ್ಷಕ್ಕಿಳಿಯದೆ ಸೌಜನ್ಯಪೂರ್ವಕವಾಗಿ ಅಧಿವೇಶನ ಕರೆದಿದ್ದಾರೆ. ಈ ಸೌಜನ್ಯವೇ ತಪ್ಪಾಯಿತೇ?'' ಎಂದು ಕೇಳಿದ್ದಾರೆ.
''ನಿಯಮಾವಳಿಯಂತೆ ಸದನದಲ್ಲಿ ಕೋರಮ್ ಬಗ್ಗೆ ಮಾರ್ಷಲ್ ಗಳಿಂದ ದೃಡೀಕರಿಸಿಕೊಂಡ ನಂತರ ಸೂಚನಾ ಗಂಟೆ ನಿಲ್ಲಿಸಲು ತಿಳಿಸಿ ಸಭಾಪತಿಗಳು ಬಂದು ಪೀಠವನ್ನು ಅಲಂಕರಿಸಬೇಕಾಗುತ್ತದೆ. ಇಂದು ಸೂಚನಾಗಂಟೆ ನಿಲ್ಲಿಸುವ ಮೊದಲೇ ಬಿಜೆಪಿ ಸದಸ್ಯರು ಉಪಸಭಾಪತಿಯವರನ್ನು ಕೂರಿಸಿ ಕಲಾಪ ನಡೆಸಲು ಹೊರಟಿದ್ದು ಅಕ್ರಮ ಅಲ್ಲವೇ?'' ಎಂದು ಪ್ರಶ್ನಿಸಿದ್ದಾರೆ.
''ರಾಜ್ಯದ ಸಚಿವರಾದ ಅಶ್ವತನಾರಾಯಣ ಅವರು ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯವರನ್ನು ಅಕ್ರಮವಾಗಿ ಕೂರಿಸ್ತಾರೆ. ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಸದನದಲ್ಲಿ ಮಾರ್ಷಲ್ ಗಳಿಗೆ ಧಮಕಿ ಹಾಕ್ತಾರೆ. ತಮ್ಮ ಪಕ್ಷದ ಸದಸ್ಯರನ್ನು ಗೂಂಡಾಗಿರಿಗೆ ಪ್ರಚೋದಿಸುವ ಇವರು ಸಚಿವರಾಗಲು ಅರ್ಹರೇ?'' ಎಂದು ಕೇಳಿದ್ದಾರೆ.
''ವಿಧಾನಪರಿಷತ್ ನಲ್ಲಿ ಇಂದು ನಡೆದಿರುವ ಘಟನಾವಳಿಗಳು ಬಿಜೆಪಿ ಮತ್ತು ಜನತಾದಳ ಸದಸ್ಯರು ಕೂಡಿ ನಡೆಸಿರುವ ಯೋಜಿತ ಷಡ್ಯಂತ್ರ. ಇದರಿಂದ ಬಿಜೆಪಿ ಮತ್ತು ಜೆಡಿ (ಎಸ್) ನಡುವಿನ ಒಳಒಪ್ಪಂದ ಬಯಲಾಗಿದೆ. ಇದಕ್ಕಾಗಿ ಎರಡೂ ಪಕ್ಷಗಳ ನಾಯಕರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು'' ಎಂದು ಆಗ್ರಹಿಸಿದ್ದಾರೆ.
''ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ವಿಧಾನಪರಿಷತ್ ನಲ್ಲಿ ನಡೆದ ಘಟನಾವಳಿಗಳನ್ನು ನಿಷ್ಪಕ್ಷಪಾತವಾಗಿ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ'' ಎಂದು ಹೇಳಿದ್ದಾರೆ.