ಬೆಂಗಳೂರು, ಡಿ. 15 (DaijiworldNews/SM): ಭಾರೀ ಕುತೂಹಲ್ ಕೆರಳಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಇದೀಗ ಜೆಡಿಎಸ್ ಬೆಂಬಲ ಸೂಚಿಸಿದೆ. ಜೆಡಿಎಸ್ ಸದಸ್ಯರು ಬೆಂಬಲ ಸೂಚಿಸಿರುವ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್ ಮಹಾಲಕ್ಷ್ನಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಆದರೆ, ಕಲಾಪ ಮುಂದೂಡಿದ ಬಳಿಕ ಬೆಂಬಲ ಪತ್ರ ನೀಡಿರುವುದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ಆ ಮೂಲಕ ಜೆಡಿಎಸ್ ಕೂಡ ಈ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿರುವುದು ಸ್ಪಷ್ಟವಾಗಿದೆ.
ಜೆಡಿಎಸ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಹಾಗೂ ಇತರ ಸದಸ್ಯರು ಪರಿಷತ್ ಕಾರ್ಯದರ್ಶಿ ಅವರನ್ನು ಭೇಟಿಯಾಗಿ ಬಿಜೆಪಿ ಅವರು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಇರುವ ಪತ್ರ ಹಸ್ತಾಂತರಿಸಿದ್ದಾರೆ. ಪರಿಷತ್ ನ ಜೆಡಿಎಸ್ ಸದಸ್ಯರಾದ ತಿಪ್ಪೇಸ್ವಾಮಿ, ಅಪ್ಪಾಜಿಗೌಡ, ಮನೋಹರ ಮತ್ತಿತರ ಸದಸ್ಯರು ಕೂಡ ಈ ಸಂದರ್ಭ ಬೆಂಬಲ ಸೂಚಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಅವಿಶ್ವಾಸ ನಿರ್ಣಯ ಬೆಂಬಲಿಸಿ ಪರಿಷತ್ ಕಾರ್ಯದರ್ಶಿ ಅವರಿಗೆ ಪತ್ರ ನೀಡಲಾಗಿದೆ. ಸಭಾಪತಿಗಳಿಗೆ ಬಹುಮತ ಇಲ್ಲ ಅವರು ರಾಜೀನಾಮೆ ಕೊಡಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.