ಬೆಂಗಳೂರು,ಡಿ.15 (DaijiworldNews/HR): ವಿಧಾನ ಮಂಡಲ ಅಧಿವೇಶನಗಳು ಆಡಳಿತ ಪಕ್ಷ - ವಿರೋಧ ಪಕ್ಷಗಳ ನಡುವಿನ ಮಾತಿನ ಗಲಾಟೆ ನಡೆಯುವು ಸಾಮಾನ್ಯ ಆದರೆ ಇಂದು ಸಭಾಪತಿ ಪೀಠಕ್ಕೆ ಬರುವ ಮೊದಲೇ ಉಪಸಭಾಪತಿ ಧರ್ಮೇಗೌಡ ಅವರು ಪೀಠದಲ್ಲಿ ಬಂದು ಕುಳಿತರು. ಅದನ್ನು ವಿರೋಧಿಸಿದ ಕಾಂಗ್ರೆಸ್ ಸದಸ್ಯರು ಅವರನ್ನು ಪೀಠದಿಂದ ಎಳೆದಿದ್ದು, ಕಿತ್ತಾಟ, ನೂಕಾಟ, ಎಳೆದಾಟಗಳಿಗೆ ವಿಧಾನ ಪರಿಷತ್ ಇಂದು ಸಾಕ್ಷಿಯಾಯಿತು.
ವಿಧಾನ ಮಂಡಲ ಅಧಿವೇಶನಕ್ಕೆ ಬೆಲ್ ಆದ ನಂತರ ಮಾರ್ಷಲ್ಗಲೊಂದಿಗೆ ಸಭಾಪತಿಗಳು ಪೀಠಕ್ಕೆ ಬರಬೇಕು, ಆದರೆ ಇಂದು ಪರಿಷತ್ ಬೆಲ್ ನಿಲ್ಲುವ ಮೊದಲೇ ಉಪಸಭಾಪತಿ ಧರ್ಮೇಗೌಡ ಪೀಠದಲ್ಲಿ ಬಂದು ಕುಳಿತಿದ್ದು, ಈ ಮಧ್ಯೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯವರು ಸದನಕ್ಕೆ ಬಾರದಂತೆ ಬಾಗಿಲನ್ನು ಲಾಕ್ ಮಾಡಲಾಗಿತ್ತು.
ಇನ್ನು ಪೀಠದಲ್ಲಿ ಉಪಸಭಾಪತಿ ಬಂದು ಕುಳಿತ ವಿಚಾರವನ್ನು ಆಕ್ಷೇಪಿಸಿದ ಕಾಂಗ್ರೆಸ್ ಸದಸ್ಯರು ಉಪಸಭಾಪತಿಗಳನ್ನು ಎಳೆದಾಡಿದದರು. ಇನ್ನೊಂದೆಡೆ ಸಭಾಪತಿ ಬರದಂತೆ ಹಾಕಿದ್ದ ಬಾಗಿಲನ್ನು ಒದ್ದು ತೆಗೆಯಲು ಕಾಂಗ್ರೆಸ್ ನ ನಜೀರ್ ಅಹ್ಮದ್ ಮತ್ತು ಬಿ.ಕೆ ಹರಿಪ್ರಸಾದ್ ಮುಂದಾದರು.
ಪೀಠದಲ್ಲಿ ಕುಳಿತಿದ್ದ ಉಪಸಭಾಪತಿ ಧರ್ಮೇಗೌಡರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದ ಕೆಳಗಿಳಿಸಿ, ಚಂದ್ರಶೇಖರ್ ಪಾಟೀಲ್ ಅವರನ್ನು ಕೂರಿಸಿ, ಪ್ರತಿಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಸದಸ್ಯ ಎಸ್.ರವಿ ಪೀಠದ ಎರಡು ಭಾಗದಲ್ಲಿ ನಿಂತು ಯಾರು ಪ್ರವೇಶಿಸದಂತೆ ತಡೆದರು.
ನಂತರ ಮಾರ್ಷಗಳ ಭದ್ರತೆಯೊಂದಿಗೆ ಆಗಮಿಸಿದ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಸಭೆಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿದರು.