ಜೈಪುರ, ಡಿ.15 (DaijiworldNews/MB) : ದೇಶದ ಶೇ. 99 ರಷ್ಟು ರೈತರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ನಿಂತಿದ್ದಾರೆ. ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು "ಕಮ್ಯುನಿಸ್ಟರು, ಕಾಂಗ್ರೆಸ್ಸಿಗರು ಮತ್ತು ಪ್ರತ್ಯೇಕತಾವಾದಿಗಳ ಪ್ರಭಾವಕ್ಕೆ ಒಳಪಟ್ಟಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜಸ್ಥಾನದ ಉಸ್ತುವಾರಿ ಅರುಣ್ ಸಿಂಗ್ ಸೋಮವಾರ ಹೇಳಿದ್ದಾರೆ.
ರಾಜಸ್ಥಾನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಆಂದೋಲನ ನಡೆಸುವವರು ಕಮ್ಯುನಿಸ್ಟರು, ಕಾಂಗ್ರೆಸ್ಸಿಗರು ಮತ್ತು ಪ್ರತ್ಯೇಕತಾವಾದಿಗಳ ಪ್ರಭಾವಕ್ಕೆ ಒಳಪಟ್ಟಿದ್ದಾರೆ. ಆದರೂ ನಾವು ಅವರ ಮನವೊಲಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನಮಗಿದೆ" ಎಂದು ಹೇಳಿದರು.
''ಕಾಂಗ್ರೆಸ್ ಯಾವಾಗಲೂ ರೈತರಿಗೆ ಮೋಸ ಮಾಡುತ್ತದೆ. ಪ್ರಸ್ತುತ ಅದು ರೈತರ ಆಂದೋಲನವನ್ನು ಬೆಂಬಲಿಸುತ್ತಿದೆ. ಈ ಹಿಂದೆ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಕೃಷಿ ಮಾರುಕಟ್ಟೆಯನ್ನು ತೆರೆಯಬೇಕು ಎಂದು ಹೇಳಿದ್ದರು. ಇದೇ ಸಂಗತಿಯನ್ನು ಕಾಂಗ್ರೆಸ್ ಪ್ರಣಾಳಿಕೆಯಲ್ಲೂ ಉಲ್ಲೇಖಿಸಲಾಗಿದೆ. ಆದರೆ ಈಗ ವಿರೋಧ ಮಾಡುತ್ತದೆ'' ಎಂದರು.
ರೈತರ ಮಸೂದೆಯ ಅಸಮಾಧಾನ ವ್ಯಕ್ತಪಡಿಸಿದ ಎನ್ಡಿಎಯ ಮಿತ್ರ ಪಕ್ಷ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಬಗ್ಗೆ ಮಾತನಾಡಿದ ಅವರು, "ನಾವು ಕುಳಿತು ಅವರ ಎಲ್ಲಾ ಅನುಮಾನಗಳನ್ನು ಬಗೆಹರಿಸುತ್ತೇವೆ. ಶೀಘ್ರದಲ್ಲೇ ಅವರಲ್ಲಿರುವ ಗೊಂದಲವನ್ನು ದೂರ ಮಾಡುತ್ತೇವೆ" ಎಂದು ತಿಳಿಸಿದರು.
''ಮೋದಿ ಸರ್ಕಾರ ಯಾವಾಗಲೂ ರೈತರೊಂದಿಗೆ ಸ್ನೇಹಪರವಾಗಿದೆ'' ಎಂದು ಕೂಡಾ ಹೇಳಿದರು.
ಇನ್ನು ಈ ಹೇಳಿಕೆಯ ಬಗ್ಗೆ ಮಾತನಾಡಿದ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, "ರೈತರ ಪ್ರತಿಭಟನೆಗೆ ಸಂಬಂಧಿಸಿ ಬಿಜೆಪಿ ನಾಯಕರು ನೀಡುವ ಹೇಳಿಕೆಗಳು ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಸರ್ಕಾರ ಸೌಹಾರ್ದಯುತವಾಗಿ ಪರಿಹಾರವನ್ನು ಕಂಡುಕೊಳ್ಳಬೇಕು. ಪ್ರತಿಭಟನಾನಿರತ ರೈತರನ್ನು ಗ್ಯಾಂಗ್ ಎಂದೆಲ್ಲಾ ಹೇಳುವ ಬದಲು ರೈತರ ಕುಂದುಕೊರತೆಗಳನ್ನು ಸಹಾನುಭೂತಿಯಿಂದ ಪರಿಹರಿಸಬೇಕು ಎಂದು ತಿರುಗೇಟು ನೀಡಿದ್ದಾರೆ.
"ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರ್ಕಾರ ರೈತರ ಬಗ್ಗೆ ಕಾಳಜಿ ತೋರದೆ ಅವರನ್ನು ನಿರ್ಲಕ್ಷಿಸುತ್ತಿದೆ. ಕೃಷಿ ಸಮುದಾಯದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವ ಕೃಷಿ ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದರು.