ತಿರುವನಂತಪುರ, ಡಿ.15 (DaijiworldNews/MB) : ಕೊರೊನಾ ಲಸಿಕೆ ಲಭ್ಯವಾದ ತಕ್ಷಣ ಕೇರಳದ ಎಲ್ಲಾ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ಒದಗಿಸಲಾಗುವುದು ಎಂದು ಹೇಳಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ಬಿಜೆಪಿ ಪಕ್ಷವು ಕೇರಳ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಂದ ಸೋಮವಾರ ವಿವರಣೆ ಕೇಳಿದೆ.
ಶನಿವಾರ ಕಣ್ಣೂರಿನಲ್ಲಿ ಮಾತನಾಡಿದ ಪಿಣರಾಯಿಯವರು, "ಕೇರಳದ ಜನರಿಗೆ ಕೊರೊನಾ ಲಸಿಕೆ ವಿಚಾರದಲ್ಲಿ ಯಾವುದೇ ಸಂಶಯ ಬೇಡ, ಲಸಿಕೆ ಲಭ್ಯವಾಗುತ್ತಿದ್ದಂತೆ ಉಚಿತವಾಗಿ ನೀಡಲಾಗುವುದು. ಅದಕ್ಕೆ ಯಾವುದೇ ರೀತಿಯ ಮೊತ್ತವನ್ನು ಸರ್ಕಾರ ಕೇಳುವುದಿಲ್ಲ" ಎಂದು ತಿಳಿಸಿದ್ದರು.
ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕೇರಳ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಬಿಜೆಪಿಯು ಕೇರಳದಲ್ಲಿ ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಈ ವೇಳೆ ಮುಖ್ಯಮಂತ್ರಿ ಈ ಘೋಷಣೆಯನ್ನು ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿದೆ. ಹಾಗೆಯೇ ಕಾಂಗ್ರೆಸ್ ಕೂಡಾ ಆಯೋಗಕ್ಕೆ ದೂರು ನೀಡಿದೆ ಎಂದು ವರದಿ ತಿಳಿಸಿದೆ.
ಆಯೋಗವು ಪಿಣರಾಯಿ ಅವರಿಗೆ ಪತ್ರ ಕಳುಹಿಸಿದ್ದು ಕೊರೊನಾ ಲಸಿಕೆ ಕುರಿತಾದ ನಿಮ್ಮ ಹೇಳಿಕೆಗೆ ವಿವರಣೆ ನೀಡಲು ತಿಳಿಸಿದೆ ಎಂದು ವರದಿಯಾಗಿದೆ.
ಇನ್ನು ಕಣ್ಣೂರಿನಲ್ಲಿ ಸೋಮವಾರ ಮತ ಚಲಾಯಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪಿಣರಾಯಿಯವರು, ''ನಾವು ಕೊರೊನಾ ರೋಗಿಗಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡುತ್ತಿದ್ದೇವೆ. ಲಸಿಕೆಯೂ ಕೂಡಾ ಚಿಕಿತ್ಸೆಯ ಒಂದು ಭಾಗ, ಈ ನಿಟ್ಟಿನಲ್ಲಿ ಅದರ ವೆಚ್ಚವನ್ನು ಕೂಡಾ ಸರ್ಕಾರವೇ ವ್ಯಯಿಸುತ್ತದೆ. ಈ ಹೇಳಿಕೆ ನೀಡಿ ನಾನು ಯಾವುದೇ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿಲ್ಲ'' ಎಂದು ಹೇಳಿದ್ದಾರೆ.
ಇನ್ನು ಈ ಹಿಂದೆ ಬಿಹಾರದ ಚುನಾವಣೆಯ ವೇಳೆ ಬಿಜೆಪಿ ನಾಯಕಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಹಾರದ ಎಲ್ಲ ನಾಗರಿಕರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ತಮ್ಮ ಪ್ರಣಾಳಿಕೆಯ ಮೊದಲ ಅಂಶವನ್ನು ಉಲ್ಲೇಖಿಸಿ ಹೇಳಿದ್ದರು. ಈ ವೇಳೆ ಈ ಹೇಳಿಕೆ ವಿರೋಧಿಸಿ ಚುನಾವಣಾ ಆಯೋಗಕ್ಕೆ ವಿರೋಧ ಪಕ್ಷಗಳು ದೂರು ನೀಡಿದ್ದು ಚುನಾವಣಾ ಆಯೋಗವು ಇದು ಬರೀ ಅಶ್ವಾಸನೆ. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದು ಎಂದು ಹೇಳಿ ಕ್ಲೀನ್ ಚಿಟ್ ನೀಡಿತ್ತು.