ಬೆಂಗಳೂರು, ಡಿ.15 (DaijiworldNews/MB) : ವೈಮಾನಿಕ ವಿಜ್ಞಾನ, ಫ್ಲೂಯಿಡ್ ಡೈನಮಿಕ್ಸ್ ಮತ್ತು ಮೋಡಗಳ ರಚನೆಯ ಬಗ್ಗೆ ಅಂತರ್ರಾಷ್ಟ್ರೀಯ ಸಂಶೋಧನೆಗಳನ್ನು ನಡೆಸಿದ್ದ ಹೆಸರಾಂತ ವಿಜ್ಞಾನಿ ಪ್ರೊ.ರೊದ್ದಂ ನರಸಿಂಹರವರು ಸೋಮವಾರ ರಾತ್ರಿ ನಿಧನರಾದರು.
87 ವರ್ಷ ಪ್ರಾಯವಾಗಿದ್ದ ಅವರಿಗೆ ಒಂದು ತಿಂಗಳ ಹಿಂದೆ ಅನಾರೋಗ್ಯ ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ರಾತ್ರಿ ಸುಮಾರು 9.30ರ ವೇಳೆಗೆ ಅವರು ಸಾವನ್ನಪ್ಪಿದ್ದಾರೆ.
1933 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ನರಸಿಂಹ ಅವರು, ತಮ್ಮ ತಂದೆ ಹಾಗೂ ವಿಜ್ಞಾನದ ಹೆಸರಾಂತ ಲೇಖಕರಾಗಿದ್ದ ಆರ್. ಎಲ್. ನರಸಿಂಹಯ್ಯ ಅವರಿಂದ ಬಾಲ್ಯದಲ್ಲಿಯೇ ವಿಜ್ಞಾನದ ಬಗ್ಗೆ ಪ್ರಭಾವಿತರಾಗಿದ್ದರು. 1953 ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದ ಅವರು 1955 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೊಮಾ ಮಾಡಿದರು.
1962 ರಿಂದ 1999 ರವರೆಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರೊಫೆಸರ್ ಆಗಿ ಅವರು ಸೇವೆ ಸಲ್ಲಿಸಿದ್ದು 1984 ರಿಂದ 1993 ರವರೆಗೆ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ(ಎನ್ಎಎಲ್)ದ ನಿರ್ದೇಶಕರಾಗಿದ್ದರು. 1992–1994ರವರೆಗೆ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್ನ ಅಧ್ಯಕ್ಷರಾಗಿದ್ದರು. 2000 ರಿಂದ 2014 ರವರೆಗೆ ಬೆಂಗಳೂರಿನ ಜೆಎನ್ಸಿಎಎಸ್ಆರ್ನ ಎಂಜಿನಿಯರಿಂಗ್ ಮೆಕ್ಯಾನಿಕ್ಸ್ ವಿಭಾಗದ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಹಾಗೆಯೇ ರಾಜೀವ್ಗಾಂಧಿ ಪ್ರಧಾನ ಮಂತ್ರಿ ಆಗಿದ್ದಾಗ ಅವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಭಾರತ ಸರ್ಕಾರದ ಉಡಾನ್ ಯೋಜನೆಗೂ ಸಲಹೆ ನೀಡಿದ್ದ ಅವರು ಕಳೆದ 15 ವರ್ಷಗಳಿಂದ ಮೋಡಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು.
ಅವರು ಭಾರತ ಸರ್ಕಾರದ ಪದ್ಮಭೂಷಣ, ಪದ್ಮವಿಭೂಷಣ ಸೇರಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.