ಮಂಗಳೂರು, ಡಿ. 14 (DaijiworldNews/SM): ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಡುಪಣಂಬೂರು ಕಲ್ಲಾಪು ಬಳಿ ಸೋಮವಾರ ಬೆಳಕಿಗೆ ಬಂದಿದೆ.
ಮೃತರನ್ನು ಬಾಡಿಗೆ ಮನೆಯಲ್ಲಿ ವಾಸವಿದ್ದ ವಿನೋದ್ ಸಾಲ್ಯಾನ್(38), ಪತ್ನಿ ರಚನಾ (38), ಮಗು ಸಾಧ್ಯ (10) ಎಂದು ಗುರುತಿಸಲಾಗಿದೆ. ಮೃತ ವಿನೋದ್ ಸಾಲ್ಯಾನ್ ಮುಂಬೈಯಲ್ಲಿ ಟಾಟಾ ಹೌಸಿಂಗ್ ನಲ್ಲಿ ಕೆಲಸಕ್ಕಿದ್ದು ಕಳೆದ ಒಂದು ವರ್ಷದ ಹಿಂದೆ ಹಳೆಯಂಗಡಿ ಸಮೀಪದ ಪಡು ಪಣಂಬೂರಿನ ಬೆಳ್ಳಾಯರು ಕಲ್ಲಾಪು ಬಳಿ ಮುಂಬೈ ಮೂಲದ ಇಂದಿರಾ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪಡುಪಣಂಬೂರು ಪರಿಸರದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ.
ಶನಿವಾರ ರಾತ್ರಿಯೇ ವಿಷ ಸೇವಿಸಿ ಸಾವಿಗೆ ಶರಣಾಗಿರಬೇಕೆಂದು ಸ್ಥಳೀಯರು ಶಂಕಿಸಿದ್ದಾರೆ. ಕಳೆದ ಎರಡು ದಿನಗಳಿಂದ ವಿನೋದ್ ಸಾಲ್ಯಾನ್ ಕುಟುಂಬದ ಮಂದಿ ಹೊರಗೆ ಬರದೇ ಇದ್ದುದನ್ನು ಕಂಡು ಮನೆಯ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಮುಲ್ಕಿ ಠಾಣಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.