ಬೆಂಗಳೂರು, ಡಿ.14 (DaijiworldNews/MB) : ನಾಲ್ಕು ಸಾರಿಗೆ ನಿಗಮಗಳ ನೌಕರರು ಐದು ದಿನಗಳಿಂದ ನಡೆಸುತ್ತಿದ್ದ ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. ಸರ್ಕಾರ ಸಾರಿಗೆ ನೌಕರರ ಹತ್ತು ಬೇಡಿಕೆಗಳಲ್ಲಿ ಒಂಬತ್ತು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಲಿಖಿತ ಭರವಸೆ ನೀಡಿದ ಹಿನ್ನೆಲೆ ನೌಕರರು ಮುಷ್ಕರ ವಾಪಾಸ್ ಪಡೆದಿದ್ದಾರೆ.
ಕೆಲವು ನೌಕರರು ಈಗಾಗಲೇ ಕರ್ತವ್ಯಕ್ಕೆ ಹಾಜರಾಗಿದ್ದು ಸಂಜೆಯಿಂದಲೇ ಎಲ್ಲ ಬಸ್ಗಳ ಸಂಚಾರ ಆರಂಭವಾಗಲಿದೆ.
ನೌಕರರು ಶುಕ್ರವಾರದಿಂದ ಮುಷ್ಕರ ಆರಂಭಿಸಿದ್ದು ಇದೀಗ ಅವರ ಮುಷ್ಕರವನ್ನು ರದ್ದುಗೊಳಿಸಿದ್ದಾರೆ. ಸರ್ಕಾರವು ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವ ಮುಖ್ಯ ಬೇಡಿಕೆಯನ್ನು ಸರ್ಕಾರ ನಿರಾಕರಿಸಿದೆ.
ರಾಜ್ಯ ಸರ್ಕಾರ ಸಂಧಾನ ಸಭೆಯ ನಡಾವಳಿಗಳ ಲಿಖಿತ ಪತ್ರ ಸಲ್ಲಿಸಿದ ನಂತರವೂ ನೌಕರರು ತಕರಾರು ಎತ್ತಿದ್ದು ಆರನೇ ವೇತನ ಆಯೋಗದ ಶಿಫಾರಸು ಜಾರಿಗೆ ನೌಕರರು ಪಟ್ಟು ಹಿಡಿದರು. ಇದರಿಂದಾಗಿ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಆ ನಂತರ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರೊಂದಿಗೆ ಕೋಡಿಹಳ್ಳಿ ಚಂದ್ರಶೇಖರ್ ಮಾತುಕತೆ ನಡೆಸಿದ್ದು ಒಂದು ಗಂಟೆಗಳ ಕಾಲ ನಡೆಸಿದ ಮಾತುಕತೆಯ ಬಳಿಕ ಮುಷ್ಕರ ವಾಪಸ್ ಪಡೆಯುವ ನಿರ್ಧಾರವನ್ನು ಕೋಡಿಹಳ್ಳಿ ಚಂದ್ರಶೇಖರ್ ಪ್ರಕಟಿಸಿದರು.