ಜಮ್ಮು-ಕಾಶ್ಮೀರ, ಡಿ.14(DaijiworldNews/HR): ಜಮ್ಮು ಕಾಶ್ಮೀರದಲ್ಲಿ ಉಗ್ರರು ಪೀಪಲ್ ಡೆಮೋಕ್ರಟಿಕ್ ಪಕ್ಷದ (ಪಿಡಿಪಿ) ನಾಯಕನ ಮನೆ ಮೇಲೆ ದಾಳಿ ನಡೆಸಿದ್ದು, ಖಾಸಗಿ ಭದ್ರತಾ ಅಧಿಕಾರಿ ಬಲಿಯಾಗಿರುವ ಘಟನೆ ಇಂದು ನಡೆದಿದೆ.
ಪಿಡಿಪಿ ಮುಖಂಡ ಪರ್ವೇಜ್ ಅಹ್ಮದ್ ಭಟ್ ಅವರ ಖಾಸಗಿ ಭದ್ರತಾ ಅಧಿಕಾರಿ ಮನ್ಜೂರ್ ಅಹ್ಮದ್ ಉಗ್ರರ ದಾಳಿಗೆ ಸಾವನ್ನಪ್ಪಿದ ವ್ಯಕ್ತಿ.
ಸೋಮವಾರ ಬೆಳಗ್ಗೆ ಶ್ರೀನಗರದ ನಾಟಿಪೋರಾ ಪ್ರದೇಶದಲ್ಲಿ ಪಿಎಸ್ ಒ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಅಹ್ಮದ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಸಾವನ್ನಪ್ಪಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.
ಇನ್ನು ದಾಳಿ ಬಳಿಕ ನಾಟಿಪೋರಾ ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು, ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.