ತಿರುವನಂತಪುರಂ, ಡಿ.14 (DaijiworldNews/MB) : ಕೊರೊನಾ ಲಸಿಕೆ ಲಭ್ಯವಾದ ತಕ್ಷಣ ಕೇರಳದ ಎಲ್ಲಾ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ಒದಗಿಸಲಾಗುವುದು ಎಂದು ಹೇಳಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ದ ಬಿಜೆಪಿ ಪಕ್ಷವು ಕೇರಳ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ವರದಿಯಾಗಿದೆ.
ಬಿಜೆಪಿ ನೀಡಿರುವ ದೂರಿನಲ್ಲಿ, ಕೇರಳದಲ್ಲಿ ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದೆ. ಈ ವೇಳೆ ಮುಖ್ಯಮಂತ್ರಿ ಈ ಘೋಷಣೆಯನ್ನು ಮಾಡಿರುವುದು ಚುನಾಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ಹೇಳಿದೆ.
"ಕೇರಳದ ಜನರಿಗೆ ಕೊರೊನಾ ಲಸಿಕೆ ವಿಚಾರದಲ್ಲಿ ಯಾವುದೇ ಸಂಶಯ ಬೇಡ, ಲಸಿಕೆ ಲಭ್ಯವಾಗುತ್ತಿದ್ದಂತೆ ಉಚಿತವಾಗಿ ನೀಡಲಾಗುವುದು. ಅದಕ್ಕೆ ಯಾವುದೇ ರೀತಿಯ ಮೊತ್ತವನ್ನು ಸರ್ಕಾರ ಕೇಳುವುದಿಲ್ಲ" ಎಂದು ಸಿಎಂ ಪಿಣರಾಯಿ ತಿಳಿಸಿದ್ದರು.
ಇನ್ನು ಈ ಹಿಂದೆ ಬಿಹಾರದ ಚುನಾವಣೆಯ ವೇಳೆ ಬಿಜೆಪಿ ನಾಯಕಿ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಿಹಾರದ ಎಲ್ಲ ನಾಗರಿಕರಿಗೂ ಉಚಿತವಾಗಿ ಕೊರೊನಾ ಲಸಿಕೆ ನೀಡಲಾಗುವುದು ಎಂದು ತಮ್ಮ ಪ್ರಣಾಳಿಕೆಯ ಮೊದಲ ಅಂಶವನ್ನು ಉಲ್ಲೇಖಿಸಿ ಹೇಳಿದ್ದರು. ಈ ವೇಳೆ ಈ ಹೇಳಿಕೆ ವಿರೋಧಿಸಿ ಚುನಾವಣಾ ಆಯೋಗಕ್ಕೆ ವಿರೋಧ ಪಕ್ಷಗಳು ದೂರು ನೀಡಿದ್ದು ಚುನಾವಣಾ ಆಯೋಗವು ಇದು ಬರೀ ಅಶ್ವಾಸನೆ. ಇದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದು ಎಂದು ಹೇಳಿ ಕ್ಲೀನ್ ಚಿಟ್ ನೀಡಿತ್ತು.
ಈಗ ಪಿಣರಾಯಿ ವಿಜಯನ್ ಭರವಸೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಬಿಜೆಪಿ ದ್ವಿಮುಖ ನೀತಿ ತೋರಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಖಂಡನೆ ವ್ಯಕ್ತವಾಗಿದೆ.