ಶಿವಮೊಗ್ಗ,ಡಿ.14(DaijiworldNews/HR): ಕೋಡಿಹಳ್ಳಿ ಚಂದ್ರಶೇಖರ್ ಅಂತಹ ಎರಡು ತಲೆ ಹಾವುಗಳು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ, ಹಾಗಾಗಿ ಅವರಂತಹ ವ್ಯಕ್ತಿಗಳ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಈ ಕುರಿತು ಶಿವಮೊಗ್ಗದಲ್ಲಿ ಮಾತನಾಡಿದ ಅವರು, "ಕೆಎಸ್ಆರ್ಟಿಸಿ ಸಿಬ್ಬಂದಿಗಳು ಮುಷ್ಕರ ನಿಲ್ಲಿಸಿ ಬಂದ್ ವಾಪಸ್ ತೆಗೆದುಕೊಂಡಿದ್ದಾಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಆದರೆ ಒಂದು ಲಕ್ಷಕ್ಕೂ ಹೆಚ್ಚು ಕೆಎಸ್ಆರ್ಟಿ ನೌಕರರನ್ನು ದಾರಿತಪ್ಪಿಸುವ ಕೆಲಸವನ್ನು ಕೋಡಿಹಳ್ಳಿ ಚಂದ್ರಶೇಖರ್ ಮಾಡಿದ್ದರು. ಅವರ ಹಿಂದೆ ಇನ್ಯಾರು ಇದ್ದು ಆಟವಾಡಿದ್ದಾರೆಯೋ ಗೊತ್ತಿಲ್ಲ. ಹುಳಿ ಹಿಂಡುವ ಕೋಡಿಹಳ್ಳಿ ಅಂತವರು ರಾಜ್ಯ ಹಾಗೂ ದೇಶವನ್ನು ಹಾಳು ಮಾಡುತ್ತಿದ್ದಾರೆ ಅವರಿಗೂ ಕೆಎಸ್ ಆರ್ ಟಿಸಿ ನೌಕರರಿಗೂ ಏನು ಸಂಬಂಧವೋ ಗೊತ್ತಿಲ್ಲ" ಎಂದರು.
ಇನ್ನು "ಕೋಡಿಹಳ್ಳಿ ಚಂದ್ರಶೇಖರ್ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ನಾವು ಗಮನಿಸುತ್ತೇವೆ. ನೌಕರರು ಪ್ರತಿಭಟನೆ ನಡೆಸಿದ್ದು ತಪ್ಪು ಎಂದು ಹೇಳುವುದಿಲ್ಲ, ಅದು ಅವರ ಹಕ್ಕು. ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸರ್ಕಾರ ಸ್ಪಂದಿಸಿದೆ, ಕೆಎಸ್ಆರ್ಟಿಸಿ ಮಾತ್ರವಲ್ಲ ರಾಜ್ಯದಲ್ಲಿ 50ಕ್ಕೂ ಹೆಚ್ಚು ನಿಗಮಗಳಿದ್ದಿ, ಈ ನಿಗಮಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ನೌಕರರಿಗೆ ಹೊರಗುತ್ತಿಗೆ ಆಧಾರದ ಮೇಲೆ ಎಂದು ನಮೂದಿಸಿಯೇ ನೇಮಕಾತಿ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.