ಬೆಂಗಳೂರು, ಡಿ.14 (DaijiworldNews/PY): "ಮುಷ್ಕರ ಕೈಬಿಟ್ಟು ಬಸ್ ಸಂಚಾರ ಮುಂದುವರೆಸಲು ನಾಲ್ಕೂ ಸಾರಿಗೆ ನಿಗಮಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಸಂಘ ಬೆಂಬಲ ಸೂಚಿಸಿದೆ" ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಸಿಎಂ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಾಲಕರು, ನಿರ್ವಾಹಕರು ಸೇರಿದಂತೆ ಮೆಕ್ಯಾನಿಕ್ಗಳು ನಾಲ್ಕೂ ಸಾರಿಗೆ ನಿಗಮಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ನೌಕರರ ಸಂಘ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದು, ಅಲ್ಲದೇ, ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಕೂಡಾ ತೀರ್ಮಾನ ಕೈಗೊಂಡಿದ್ದಾರೆ" ಎಂದು ತಿಳಿಸಿದ್ದಾರೆ.
"ರವಿವಾರ ನಡೆದ ಸಭೆಯ ನಿರ್ಧಾರಗಳನ್ನು ಲಿಖಿತ ರೂಪದಲ್ಲಿ ನೀಡಲು ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಅವರು ಗಂಟೆಗೊಂದು ಮಾತನಾಡುತ್ತಾರೆ" ಎಂದು ಅಸಮಾಧಾನ ಹೊರಹಾಕಿದರು.
ಈ ವೇಳೆ ಮತನಾಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, "ಮುಷ್ಕರದ ವಿಚಾರವಾಗಿ ರವಿವಾರ ರಾತ್ರಿಯೂ ಕೂಡಾ ಸಾರಿಗೆ ನೌಕರರ ಕೂಟದ ಮುಖಂಡರೊಂದಿಗೆ ಮಾತನಾಡಿದ್ದೆವು. ಈ ವೇಳೆ ಅವರು ನಮ್ಮನ್ನು ಹೈಜಾಕ್ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಮಾಧ್ಯಮದವರ ಎದುರು ಸಾರ್ವಜನಿಕರೊಂದಿಗೆ ಕ್ಷಮೆ ಕೇಳಿ ಮುಷ್ಕರ ಕೈಬಿಡುವುದಾಗಿ ತಿಳಿಸಿದ್ದರು. ಇದೀಗ ಯುಟರ್ನ್ ಹೊಡೆದಿದ್ದಾರೆ" ಎಂದು ಹೇಳಿದ್ದಾರೆ.