ನವದೆಹಲಿ, ಡಿ.14 (DaijiworldNews/MB) : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕಳೆದ 19 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ರೈತರ ಈ ಸತ್ಯಾಗ್ರಹವನ್ನು ಬೆಂಬಲಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೂಡಾ ಒಂದು ದಿನದ ಉಪವಾಸ ನಡೆಸುತ್ತಿದ್ದಾರೆ. ಹಾಗೆಯೇ ಜನರು ಕೂಡಾ ಉಪವಾಸ ಮಾಡುವ ಮೂಲಕ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ತಮ್ಮ ಆಮ್ ಆದ್ಮಿ ಪಕ್ಷದ (ಎಎಪಿ) ಸ್ವಯಂಸೇವಕರು, ಬೆಂಬಲಿಗರು ಮತ್ತು ದೇಶದ ಜನರು ರೈತರ ಆಂದೋಲನಕ್ಕೆ ಸೇರಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
"ಉಪವಾಸವು ಪವಿತ್ರವಾಗಿದೆ. ನೀವು ಎಲ್ಲಿದ್ದರೂ ನಮ್ಮ ರೈತ ಸಹೋದರರಿಗಾಗಿ ಉಪವಾಸ ಮಾಡಿ. ಅವರ ಹೋರಾಟದ ಯಶಸ್ಸಿಗೆ ದೇವರನ್ನು ಪ್ರಾರ್ಥಿಸಿ. ಕೊನೆಯಲ್ಲಿ ರೈತರು ಖಂಡಿತವಾಗಿಯೂ ಗೆಲ್ಲುತ್ತಾರೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಪಕ್ಷದ ಇತರ ಸದಸ್ಯರೊಂದಿಗೆ ಪಕ್ಷದ ಕಚೇರಿಯಲ್ಲಿ ಉಪವಾಸವನ್ನು ಆಚರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
"ದೇಶದ ಅನ್ನದಾತ ರೈತರು ತನ್ನ ಹಸಿವು ನೀಗಿಸುವ ದಿನದ ಆಹಾರವನ್ನು ಉಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ರೈತರ ಬೇಡಿಕೆಯನ್ನು ಬೆಂಬಲಿಸಿ, ಇಂದು ನಾನು ನನ್ನ ಎಲ್ಲ ಸಹೋದ್ಯೋಗಿಗಳೊಂದಿಗೆ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಉಪವಾಸದಲ್ಲಿದ್ದೇನೆ'' ಎಂದು ಟ್ವೀಟ್ ಮಾಡಿದ್ದಾರೆ.
ಸಿಸೋಡಿಯಾ ಮಾತ್ರವಲ್ಲದೆ, ಎಎಪಿ ಮಂತ್ರಿಗಳಾದ ಗೋಪಾಲ್ ರೈ, ಸತ್ಯೇಂದರ್ ಜೈನ್, ಅತಿಶಿ ಮತ್ತು ರಾಘವ್ ಚಾಧಾ ಸೇರಿದಂತೆ ಶಾಸಕರು ಸಹ ಇಲ್ಲಿನ ಪಕ್ಷದ ಕಚೇರಿಯಲ್ಲಿ ರೈತರಿಗೆ ಬೆಂಬಲವಾಗಿ ಉಪವಾಸ ನಡೆಸುತ್ತಿದ್ದಾರೆ.