ಕೊಲ್ಕತ್ತಾ, ಡಿ.14 (DaijiworldNews/PY): ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿರುವ ಗೋರ್ಖಾ ಜನಮುಕ್ತಿ ಮೋರ್ಚಾ ಮುಖಂಡ ಬಿಮಲ್ ಗುರುಂಗ್ ಅವರು, "ಬಿಜೆಪಿ ಕೇವಲ ಭರವಸೆ ಮಾತ್ರ ನೀಡುತ್ತದೆ. ಯಾವುದನ್ನೂ ಈಡೇರಿಸುವುದಿಲ್ಲ" ಎಂದಿದ್ದಾರೆ.
ಅಲಿಪುರದೂರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, "ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸಂಘಟನೆ ತೃಣಮೂಲ ಕಾಂಗ್ರೆಸ್ಗೆ ಬೆಂಬಲ ನೀಡಲಿದೆ" ಎಂದು ಹೇಳಿದ್ದಾರೆ.
"ಎನ್ಡಿಎ ಸರ್ಕಾರ ಗೋರ್ಖಾಗಳಿಗೆ ಪ್ರತ್ಯೇಕ ರಾಜ್ಯ ನೀಡು ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ನಮ್ಮ ಬೇಡಿಕೆಗಳಿಗೆ ಖಾಯಂ ಪರಿಹಾರ ಕಲ್ಪಿಸುವ ಸಲುವಾಗಿ ನೀವು ಪ್ರಶ್ನೆ ಮಾಡಿದ್ದೀರಾ?. ನಿಮ್ಮ ಪಕ್ಷ ಕೇವಲ ಆಶ್ವಾಸನೆಯನ್ನು ಮಾತ್ರ ನೀಡುತ್ತದೆ. ಆದರೆ, ಆ ಆಶ್ವಾಸನೆಗಳನ್ನು ಈಡೇರಿಸುವುದಿಲ್ಲ" ಎಂದಿದ್ದಾರೆ.
"ಮಮತಾ ಬ್ಯಾನರ್ಜಿ ಅವರು ನೀಡಿದ ಆಶ್ವಾಸನೆ ಹಾಗೂ ಅದನ್ನು ಈಡೇರಿಸುವುದನ್ನು ನಾನು ನೋಡಿದ್ದೇವೆ. ಅವರು ಸಾಧ್ಯವಾದಷ್ಟು ಮಟ್ಟಿಗೆ ಈ ಬೆಟ್ಟ ಪ್ರದೇಶಕ್ಕೆ ಕೊಡುಗೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.