ನವದೆಹಲಿ, ಡಿ.14 (DaijiworldNews/PY): "ಮುಷ್ಕರ ನಿರತ ಸಾರಿಗೆ ನೌಕರರನ್ನು ದಾರಿ ತಪ್ಪಿಸುತ್ತಿರುವ ನಕಲಿ ನಾಯಕರಿಗೆ ತಕ್ಕ ಶಿಕ್ಷೆ ಕಾದಿದೆ" ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳುದ್ದಾರೆ.
ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರು ಕೂಡಲೇ ಮುಷ್ಕರವನ್ನು ನಿಲ್ಲಿಸಿ ಕೆಲಸಕ್ಕೆ ಹಾಜರಾಗಬೇಕು. ಮುಷ್ಕರ ಮುಂದುವರೆಸುವುದು ಸರಿಯಲ್ಲ. ಸಿಎಂ ಅವರ ಮುಂದೆ ಮುಷ್ಕರ ನಿಲ್ಲಿಸುವುದಾಗಿ ಒಪ್ಪಿದ ಮುಖಂಡರು, ಹೊರಗೆ ಹೋದ ಬಳಿಕ ಯು ಟರ್ನ್ ಹೊಡೆದಿದ್ದಾರೆ ಏಕೆ?" ಎಂದು ಕೇಳಿದ್ದಾರೆ.
"ನೌಕರರನ್ನು ನಕಲಿ ನಾಯಕರು ದಾರಿ ತಪ್ಪಿಸುತ್ತಿದ್ದಾರೆ. ರೈತ ನಾಯಕರ ಸೋಗಿನಲ್ಲಿದ್ದವರು ಸಾರಿಗೆ ಮುಖಂಡರ ಮುಖಂಡರಾಗಿದ್ದು ಹೇಗೆ?" ಎಂದು ಪ್ರಶ್ನಿಸಿದ್ದಾರೆ.
"ಸಿಎಂ ಅವರು ಸಾಧ್ಯವಾಗುವ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದಾರೆ. ಅವರು ಈ ಬಗ್ಗೆ ಒಮ್ಮೆ ಹೇಳಿದರು ಎಂದರೆ ಬೇಡಿಕೆಗಳು ಕೂಡಲೇ ಈಡೇರುತ್ತವೆ. ಇದು ಅನೇಕ ಬಾರಿ ಸಾಬೀತಾಗಿದೆ" ಎಂದು ತಿಳಿಸಿದ್ದಾರೆ.
"ರಾಜ್ಯದ ಜನರಿಗೆ ಸಾರಿಗೆ ವ್ಯವಸ್ಥೆಯಿಲ್ಲದೆ ತೊಂದರೆಯಲ್ಲಿ ಸಿಲುಕಿದ್ದಾರೆ. ಮುಖ್ಯಮಂತ್ರಿಯವರ ಮಾತು ಕೇಳಿ ಸಾರಿಗೆ ನೌಕರರು ತಮ್ಮ ಕರ್ತವ್ಯಕ್ಕೆ ವಾಪಾಸ್ಸಾಗಬೇಕು" ಎಂದು ಹೇಳಿದ್ದಾರೆ.
"ಸರ್ಕಾರ ಸಾರಿಗೆ ನೌಕರರ ಬೇಡಿಕೆಯನ್ನು ಗಮನಿಸಿದೆ. ಇನ್ನೂ ಕೂಡಾ ಸಾರ್ವಜನಿಕರು ತೊಂದರೆ ಅನುಭವಿಸುವುದು ಬೇಡ. ಅಲ್ಲದೇ, ಈ ಪರಿಸ್ಥಿತಿಯನ್ನು ನೋಡಿಕೊಂಡಿರಲು ಸಾಧ್ಯವಿಲ್ಲ. ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಿ" ಎಂದು ಮನವಿ ಮಾಡಿದ್ದಾರೆ.