ನವದೆಹಲಿ, ಡಿ.14(DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರು ಸಿಖ್ ಸಮುದಾಯವನ್ನು ಬೆಂಬಲಿಸಿ ತೆಗೆದುಕೊಂಡಿರುವ 13 ನಿರ್ಣಯಗಳನ್ನು ಪಟ್ಟಿ ಮಾಡಿ ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ಸುಮಾರು ಐದು ದಿನಗಳಲ್ಲಿ ಎರಡು ಕೋಟಿ ಇ-ಮೇಲ್ಗಳನ್ನು ತನ್ನ ಗ್ರಾಹಕರಿಗೆ ಕಳುಹಿಸಿರುವುದು ಬಹಿರಂಗವಾಗಿದೆ.
'ಸಿಖ್ಖರೊಂದಿಗೆ ಮೋದಿ ಮತ್ತು ಸರ್ಕಾರದ ಸಂಬಂಧ' ಎಂಬ 47 ಪುಟಗಳ ಡಿಜಿಟಲ್ ರೂಪದ ಪುಸ್ತಕವನ್ನು ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್ಸಿಟಿಸಿ) ತನ್ನ ಗ್ರಾಹಕರಿಗೆ ಇ-ಮೇಲ್ ಮೂಲಕ ರವಾನಿಸಿದೆ.
ಈ ಪುಸ್ತಕ ಡಿಜಿಟಲ್ ರೂಪದಲ್ಲಿದ್ದು, ಹಿಂದಿ, ಇಂಗ್ಲಿಷ್ ಜೊತೆಗೆ ಪಂಜಾಬಿಯಲ್ಲೂ ಮುದ್ರಣಗೊಂಡಿದೆ. ಟಿಕೆಟ್ ಬುಕಿಂಗ್ ಮಾಡುವಾಗ ಗ್ರಾಹಕರು ತಮ್ಮ ವಿಳಾಸದೊಂದಿಗೆ ಇ-ಮೇಲ್ಗಳನ್ನೂ ರೈಲ್ವೆ ಇಲಾಖೆಗೆ ನೀಡಿರುತ್ತಾರೆ. ಹೀಗೆ ಸಂಗ್ರಹಿಸಿದ ಇ-ಮೇಲ್ಗಳಿಗೂ ಐಆರ್ಸಿಟಿಸಿ ಸಂದೇಶ ಕಳುಹಿಸಿರುವುದಾಗಿ ತಿಳಿದು ಬಂದಿದೆ.
ಇನ್ನು ಸಿಖ್ ಸಮುದಾಯಕ್ಕೆ ಮಾತ್ರವೇ ಸರ್ಕಾರ ಈ ಸಂದೇಶಗಳನ್ನು ಕಳುಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಭಾರತೀಯ ರೈಲ್ವೆ ಕೆಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್ಸಿಟಿಸಿ) ಇದನ್ನು ನಿರಾಕರಿಸಿದೆ.