ನವದೆಹಲಿ, ಡಿ.14 (DaijiworldNews/PY): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮುಂದೆ ಧರಣಿ ಕುಳಿತಿರುವ ಬಿಜೆಪಿ ನಾಯಕರು ಅರವಿಂದ್ ಕೇಜ್ರಿವಾಲ್ ಅವರ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಧ್ವಂಸಗೊಳಿಸಿರುವುದಾಗಿ ದೆಹಲಿ ಸಿಎಂ ಕಚೇರಿ ಆರೋಪಿಸಿದೆ.
ಧರಣಿ ನಡೆಸುತ್ತಿರುವ ಬಿಜೆಪಿ ನಾಯಕರು ಸಿಎಂ ಅವರ ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ಒಡೆದು ಹಾಕಿರುವುದಾಗಿ ಸಿಎಂಒ ಹೇಳಿಕೆಯಲ್ಲಿ ತಿಳಿಸಿದೆ.
ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಮೇಯರ್ಗಳು ಹಾಗೂ ಪುರಸಭೆಯ ಮುಖಂಡರು ಧರಣಿ ನಡೆಸುತ್ತಿದ್ದು, ಸುಮಾರು 13000 ಕೋಟಿ ರೂ. ಬಾಕಿ ಇರುವ ಅನುದಾನದ ಮೊತ್ತವನ್ನು ಪಡೆಯುವ ಬೇಡಿಕೆ ಇರಿಸಿದ್ದಾರೆ.
ಇದಕ್ಕೂ ಮುನ್ನ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸ ಮೇಲೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ ಎಂದು ಎಎಪಿ ಆರೋಪ ಮಾಡಿತ್ತು.
ಈ ನಡುವೆ ಕೃಷಿ ಕಾಯ್ದೆಗಳ ವಿರುದ್ದ ದೆಹಲಿಯ ಗಡಿಭಾಗಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಅರವಿಂದ್ ಕೇಜ್ರಿವಾಲ್ ಅವರು, ಒಂದು ದಿನದ ಉಪವಾಸ ಮಾಡುವುದಾಗಿ ತಿಳಿಸಿದ್ದಾರೆ.