ಮೈಸೂರು, ಡಿ.14 (DaijiworldNews/MB) : ಕರ್ನಾಟಕ ರಾಜ್ಯ ರೈತಸಂಘವು ರಾಜ್ಯದ ''ಗೋಹತ್ಯೆ ನಿಷೇಧ ಮಸೂದೆಯನ್ನು ರೈತ ವಿರೋಧಿ'' ಎಂದು ಹೇಳಿದ್ದು ''ಈ ಕಾಯ್ದೆಯಿಂದ ರೈತರ ಆದಾಯಕ್ಕೆ ತೊಂದರೆ ಉಂಟಾಗುತ್ತದೆ. ಯಾಕೆಂದರೆ ಈ ಮಸೂದೆಯ ಪ್ರಕಾರ ಅನುತ್ಪಾದಕವಾದ ಹಸುವನ್ನು ಹತ್ಯೆ ಮಾಡುವಂತಿಲ್ಲ. ಇದು ರೈತರ ಮೇಲೆ ಹೊರಯಾಗಿ ಪರಿಣಮಿಸಲಿದೆ'' ಎಂದು ಹೇಳಿದ್ದಾರೆ.
''ಹಸುಗಳನ್ನು ಸಾಕುವ ಕಷ್ಟ ರೈತರಿಗೆ ಮಾತ್ರ ತಿಳಿದಿದೆ. ನಮಗೂ ಅದರ ಕಾಳಜಿಯಿದೆ. ನಿಜವಾಗಿಯೂ ರೈತರು ಗೋರಕ್ಷಕರು. ಈ ಮಸೂದೆಯನ್ನು ಜಾರಿ ಮಾಡುವಂತೆ ಒತ್ತಾಯಿಸಿರುವುದು ರೈತರಲ್ಲ'' ಎಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
''ಇನ್ನು ಈ ಸಂಕಷ್ಟದ ಸಂದರ್ಭದಲ್ಲಿ ಅನುತ್ಪಾದಕ ಹಸುಗಳನ್ನು ನೋಡಿಕೊಳ್ಳುವುದು ರೈತರಿಗೆ ತೊಂದರೆ ಉಂಟು ಮಾಡುತ್ತದೆ. ಈ ಕಾನೂನಿನಿಂದಾಗಿ ರೈತರಿಗೆ ಈ ಅನುತ್ಪಾದಕ ಹಸುಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಹಸುಗಳ ನಿರ್ವಹಣೆ ದುಬಾರಿ ಎಂಬ ಕಾರಣಕ್ಕೆ ಈಗ ರೈತರು ಬೆರಳೆಣಿಕೆಯಷ್ಟು ಜಾನುವಾರುಗಳನ್ನು ಮಾತ್ರ ಸಾಕುತ್ತಾರೆ. ಇನ್ನು ಈ ಅನುತ್ಪಾದಕ ಹಸುಗಳನ್ನು ಕೂಡಾ ಸಾಕುವುದು ರೈತರ ಆದಾಯಕ್ಕೆ ತೊಂದರೆ ಉಂಟು ಮಾಡಲಿದೆ'' ಎಂದು ಹೇಳಿದರು.