ಜಮ್ಮು, ಡಿ.14 (DaijiworldNews/PY): ಜಮ್ಮು-ಕಾಶ್ಮೀರ ಜಿಲ್ಲೆಯ ಸುರಾನ್ಕೋಟ್ನಲ್ಲಿ ಡಿ.13ರ ರವಿವಾರ ಬೆಳಗ್ಗೆ ಭದ್ರತಾ ಸಿಬ್ಬಂದಿ ಹಾಗೂ ಉಗ್ರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಓರ್ವನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಉಗ್ರರು ಮೂರು ದಿನಗಳ ಹಿಂದೆ ಎಲ್ಒಸಿ ಮುಖೇನ ಭಾರತದೊಳಕ್ಕೆ ನುಸುಳಿದ್ದು, ದಕ್ಷಿಣ ಕಾಶ್ಮೀರದ ಸೋಪಿಯಾನ್ ಜಿಲ್ಲೆಯತ್ತ ಸಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ತಕ್ಷಣವೇ ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಗಳ ತಂಡ ಛತ್ತಪಾನಿ-ದುಗ್ರಾನ್ ಗ್ರಾಮಕ್ಕೆ ಧಾವಿಸಿ ಪತ್ತೆ ಕಾರ್ಯ ಕೈಗೊಂಡಿತ್ತು.
ಈ ಸಂದರ್ಭ ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಮೂವರು ಸಾಗುತ್ತಿದ್ದು, ಅವರಿಗೆ ಶರಣಾಗುವಂತೆ ತಿಳಿಸಲಾಗಿತ್ತು. ಆದರೆ, ಇದಕ್ಕೆ ಒಪ್ಪದ ಅವರು ಭದ್ರತಾ ಸಿಬ್ಬಂದಿಗಳ ಮೇಲೆ ಗುಂಡಿನ ದಾಳಿ ನಡೆಸಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಭದ್ರತಾ ತಂಡ ಪ್ರತಿ ದಾಳಿ ನಡೆಸಿದ್ದು, ಇಬ್ಬರು ಉಗ್ರರನ್ನು ಸದೆಬಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹತ್ಯೆಯಾಗಿರುವ ಉಗ್ರರು ಪಾಕಿಸ್ತಾನದ ಪ್ರಜೆಗಳಾಗಿರುವ ಶಂಕೆಯಿದೆ. ಅವರ ಗುರುತು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ.