ನವದೆಹಲಿ, ಡಿ.14 (DaijiworldNews/PY): ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯು ಡಿ.14ರ ಸೋಮವಾರದಂದು ತೀವ್ರಗೊಳ್ಳಲಿದ್ದು, ಬೇಡಿಕೆ ಪೂರೈಕೆಗೆ ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ರೈತ ಮುಖಂಡ ಗುರುನಾಮಸಿಂಗ್ ಛದುನಿ, "ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರೈತ ಸಂಘಟನೆಗಳ ಎಲ್ಲಾ ಮುಖಂಡರೂ ಕೂಡಾ ಸೋಮವಾರ ಬೆಳಗ್ಗೆ 8 ರಿಂದ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಪ್ರತಿಭಟನೆಯನ್ನು ತೀವ್ರಗೊಳಿಸುವ ಸಲುವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ" ಎಂದಿದ್ದಾರೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರೂ ಕೂಡಾ ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದು, "ಸೋಮವಾರ ಇಡೀ ದಿನ ಉಪವಾಸವಿರಲಿದ್ದೇನೆ" ಎಂದಿದ್ದಾರೆ.
"ಕೇಂದ್ರ ಸರ್ಕಾರ ಮೊದಲು ತನ್ನ ದುರಂಹಕಾರವನ್ನು ಬಿಟ್ಟು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು" ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರೊಂದಿಗೆ ಪಂಜಾಬ್ ಹಾಗೂ ಹರಿಯಾಣದ ನೂರಾರು ಮಹಿಳೆಯರು ಕೂಡಾ ದೆಹಲಿಗೆ ಬಂದು ಸೇರಿಕೊಳ್ಳಲಿದ್ದಾರೆ. ನಮ್ಮ ಮನೆಯ ಪುರುಷರು ಪ್ರತಿಭಟನೆ ನಡೆಸುತ್ತಿದ್ದರೂ ಕೂಡಾ ನಾವೇಕೆ ಮನೆಯಲ್ಲಿ ಕುಳಿತಿರಬೇಕು? ಎಂದು ಪ್ರತಿಭಟನಾಕಾರರೊಂದಿಗೆ ಸೇರಲು ದೆಹಲಿಯತ್ತ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರು ತಿಳಿಸಿದ್ದಾರೆ.