ಬೆಂಗಳೂರು, ಡಿ.14 (DaijiworldNews/PY): ರಾಜ್ಯದಲ್ಲಿ ಡಿ.22 ಹಾಗೂ 27 ರಂದು ನಡೆಯಲಿರುವ ಎರಡು ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಹೆಚ್ಚುತ್ತಿರುವ ವಿಚಾರವನ್ನು ರಾಜ್ಯ ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಂಡಿದೆ.
ಸಾಂಧರ್ಭಿಕ ಚಿತ್ರ
ಚುನಾವಣೆ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿರುವ ಚುನಾವಣಾ ಆಯೋಗ, ಅಭ್ಯರ್ಥಿಗಳು ರಾಜಕೀಯ ಮುಖಂಡರ ಭಾವಚಿತ್ರ, ಕಟೌಟ್, ಬ್ಯಾನರ್ಗಳ ಮುಖೇನ ಪ್ರಚಾರ ಕೈಗೊಳ್ಳಬಾರದು, ನಿಯಮ ಉಲ್ಲಂಘನೆ ಮಾಡಿದ್ದಲ್ಲಿ, ಚುನಾವಣಾ ಪ್ರಚಾರದ ಸಾಮಾಗ್ರಿಗಳನ್ನು ಮುಟ್ಟುಗೋಲು ಹಾಕುವುದಲ್ಲದೇ, ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತಗಳಿಗೆ ತಿಳಿಸಿದೆ.
ಆದರೆ, ಆಯೋಗದ ನಿಯಮಗಳನ್ನು ಗಾಳಿಗೆ ತೂರಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಭೆ ಸಮಾರಂಭ ನಡೆಸಿ, ಗ್ರಾ.ಪಂ ಚುನಾವಣೆ ರಾಜಕೀಯಗೊಳಿಸುತ್ತಿರುವ ವಿಚಾರವಾಗಿ ಚುನಾವಣಾ ಆಯೋಗ ಕೋಪಗೊಂಡಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಕಾಯ್ದೆ 1992ರ ಪ್ರಕಾರ, ಗ್ರಾ.ಪಂ ಚುನಾವಣೆಯನ್ನು ಪಕ್ಷ ರಹಿತವಾಗಿ ನಡೆಸಬೇಕಿದ್ದು, ಅಭ್ಯರ್ಥಿಗಳಿಗೆ ಮುಕ್ತವಾದ ಚಿಹ್ನೆ ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಎಲ್ಲಾ ರಾಜಕೀಯ ಪಕ್ಷಗಗಳ ಮುಖಂಡರು ಸೇರಿದಂತೆ ಅಭ್ಯರ್ಥಿಗಳಿಗೆ ಕಾನೂನು ಉಲ್ಲಂಘನೆಯಾಗದಂತೆ ಸೂಚನೆ ನೀಡಿದೆ. ಅಲ್ಲದೇ, ಈ ವಿಚಾರವಾಗಿ ನಿಗಾ ವಹಿಸುವಂತೆಯೂ ಜಿಲ್ಲಾಧಿಕಾರಿಗಳಿಗೆ ತಿಳಿಸಿದೆ.