ನವದೆಹಲಿ, ಡಿ. 13 (DaijiworldNews/SM): ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾಯ್ದೆಗಳಿಗೆ ದೇಶದ ಉದ್ದಗಲಕ್ಕೂ ರೈತರು ಹೋರಾಟ ನಡೆಸುತ್ತಿದ್ದು, ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ದೆಹಲಿ ಸಿಎಂ ಬೆಂಬಲ ನೀಡಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಭಟನೆಗೆ ಬೆಂಬಲಿಸಿದ್ದು, ಸೋಮವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ರೈತರನ್ನು ರಾಷ್ಟ್ರದ್ರೋಹಿಗಳು ಎಂದು ಕರೆದಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಸಾಕಷ್ಟು ನಿವೃತ್ತ ಸೇನಾ ಯೋಧರು, ಕ್ರೀಡಾಪಟುಗಳು, ವೈದ್ಯರು, ವಕೀಲರು, ವ್ಯಾಪಾರಿಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ. ಹಾಗಾದರೆ, ಬಿಜೆಪಿ ಲೆಕ್ಕಾಚಾರದ ಪ್ರಕಾರ ಬೆಂಬಲಿಸಿದವರೆಲ್ಲರೂ, ರಾಷ್ಟ್ರದ್ರೋಹಿಗಳೇ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೇಂದ್ರ ಸರ್ಕಾರ ತಮ್ಮ ಅಹಂ ಅನ್ನು ಕೈಬಿಟ್ಟು, ಈ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ದೆಹಲಿ ಸಿಎಂ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.