ಬಾಗಲಕೋಟೆ, ಡಿ.13 (DaijiworldNews/PY): "ಕುರುಬರ ಜಾತಿ ಒಡೆಯಲು ಹಾಗೂ ನನ್ನನ್ನು ದುರ್ಬಲ ಮಾಡುವುದರ ಹಿಂದೆ ಆರ್ಎಸ್ಎಸ್ನ ಹುನ್ನಾರ ಇದೆ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ರವಿವಾರ ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕುರುಬರ ಸಮುದಾಯದ ಎಸ್ಟಿ ಸೇರ್ಪಡೆ ಹೋರಾಟದಲ್ಲಿ ಸಿದ್ದರಾಮಯ್ಯರ ಅನುಮತಿ ಪಡೆದು ಹೋರಾಟ ಕೈಗೆತ್ತಿಕೊಂಡಿರುವುದಾಗಿ ಯಾವ ಅರ್ಥದಲ್ಲಿ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೋ ನನಗೆ ತಿಳಿದಿಲ್ಲ" ಎಂದರು.
"ಸಿದ್ದರಾಮಯ್ಯ ಅವರನ್ನು ಎಸ್ಟಿ ಹೋರಾಟಕ್ಕೆ ಆಹ್ವಾನಿಸಿ ಹೋರಾಟಕ್ಕೆ ಇಳಿದಿದ್ದೀವಿ ಎನ್ನುವ ನಿರಂಜನಾನಂದಪುರಿ ಸ್ವಾಮೀಜಿ ಅವರ ಹೇಳಿಕೆ ಸರಿ. ಮೊದಲು ಸ್ವಾಮೀಜಿ ಅವರು ಬಂದಿದ್ದು ನಿಜ. ಈಶ್ವರಪ್ಪ ಅವರು ಹೀಗೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಿದ್ದರು. ಇದು ನಿಮಗೆ ಬಿಟ್ಟ ವಿಚಾರ ಎಂದಿದ್ದೆ. ಇದಾದ ಬಳಿಕ ತಿಳಿಯಿತು ಈಶ್ವರಪ್ಪ ಅವರು ಹೋರಾಟಕ್ಕೆ ಬಾಗಲಕೋಟೆಗೆ ಬಂದಿದ್ದರು ಎಂದು. ಆರ್ಎಸ್ಎಸ್ನವರ ಮನೆಯಲ್ಲಿ ಊಟ ಮಾಡಿದ್ದು, ಆರ್ಎಸ್ಎಸ್ನವರೇ ಹೋರಾಟಕ್ಕೆ ದುಡ್ಡು ಕೊಟ್ಟಿದ್ದು" ಎಂದು ತಿಳಿಸಿದರು.
"ಎಸ್ಟಿ ಮೀಸಲಾತಿಗೆ ಕುರುಬ ಸಮುದಾಯವನ್ನು ಸೇರಿಸುವ ವಿಚಾರವಾಗಿ ನನಗೆ ಯಾವುದೇ ವಿರೋಧವಿಲ್ಲ. ಪ್ರಧಾನಿ ಮೋದಿ ಅವರನ್ನು ಹಿಡಿದು ಮೀಸಲಾತಿ ನೀಡಲಿ ಬೇಡ ಎಂದು ಯಾರೂ ಹೇಳಿಲ್ಲ. ಕುರುಬರನ್ನು ಬೇರೆ ಮಾಡಬೇಕು ಎನ್ನುವುದು ಆರ್ಎಸ್ಎಸ್ನ ಉದ್ದೇಶ. ಮೀಸಲಾತಿ ವಿಚಾರವನ್ನ ಮೊದಲು ಕ್ಯಾಬಿನೇಟ್ಗೆ ತಂದು ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಕಾರ್ಯ ಮಾಡಲಿ" ಎಂದರು.
"ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮಾಡಿದ್ದು ಏನಾಯಿತು?. ಉಡುಪಿ ಕನಕ ಗೂಪುರ ಒಡೆದ ಸಂದರ್ಭ ನಾವೆಲ್ಲಾ ಹೋರಾಟ ಮಾಡಿದ್ದೆವು. ಆ ಸಂದರ್ಭ ನಾನು ಕುರುಬ ಅಲ್ಲ ಹಿಂದೂ ಎಂದು ಹೇಳಿದ್ದರು" ಎಂದರು.