ಚೆನ್ನೈ,ಡಿ.13 (DaijiworldNews/HR): ಸದ್ಯದ ಪರಿಸ್ಥಿತಿಯಲ್ಲಿ ದೇಶದ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿರುವಾಗ 1,000 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಹೊಸ ಸಂಸತ್ ಕಟ್ಟಡವನ್ನು ನಿರ್ಮಿಸುವ ಅಗತ್ಯವಿದೆಯೇ ಎಂದು ಚಿತ್ರನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ತನ್ನ ಪಕ್ಷ ಮಕ್ಕಳ್ ನೀಧಿ ಮೈಯಮ್ ಪರವಾಗಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದ ಅನೇಕ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಈ ಸಮಯದಲ್ಲಿ ಇಂತಹ 1,000 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗುವ ಬೃಹತ್ ಕಟ್ಟಡ ಯಾಕೆ ಬೇಕು ಎಂದರು."
ಇನ್ನು ದೇಶದ ಅರ್ಧದಷ್ಟು ಜನರು ಹಸಿವಿನಿಂದ ಬಳಲುತ್ತಿರುವ ಸಮಯದಲ್ಲಿ, ಕೊರೊನಾ ವೈರಸ್ನಿಂದಾಗಿ ದೇಶದ ಜನತೆ ಜೀವನೋಪಾಯವನ್ನು ಕಳೆದುಕೊಂಡಿರುವಾಗ 1,000 ಕೋ.ರೂ. ವೆಚ್ಚದ ಹೊಸ ಸಂಸತ್ತಿನ ಅಗತ್ಯವಿದೆಯ? ಚೀನಾದ ಗೋಡೆ ನಿರ್ಮಿಸುವಾಗ ಸಾವಿರಾರು ಜನರು ಸತ್ತರು. ಆಗ ಇದನ್ನು ಜನರ ರಕ್ಷಣೆಗಾಗಿ ಕಟ್ಟಲಾಗುತ್ತಿದೆ ಎಂದು ಆಡಳಿತಗಾರರು ಹೇಳಿಕೊಂಡಿದ್ದರು. ಇಷ್ಟು ಕೋಟಿ ವೆಚ್ಚದ ಸಂಸತ್ತನ್ನು ನೀವು ಯಾರ ರಕ್ಷಣೆಗಾಗಿ ಕಟ್ಟುತ್ತಿದ್ದೀರಿ ಎಂದು ಹೇಳಿದ್ದಾರೆ.