ನವದೆಹಲಿ, ಡಿ.13 (DaijiworldNews/PY): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಮುಂದೆ ಧರಣಿ ನಡೆಸಲು ಯೋಜನೆ ರೂಪಿಸದ್ದ ಕಾರಣ ದೆಹಲಿ ಪೊಲೀಸರು ಭಾನುವಾರ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಛಡ್ಡಾ, ಅತಿಶಿ ಸೇರಿದಂತೆ ಹಲವು ನಾಯಕರನ್ನು ಬಂಧಿಸಿದ್ದಾರೆ.
ಈ ಬಗ್ಗೆ ವಿಡಿಯೋ ಟ್ವೀಟ್ ಮಾಡಿರುವ ಎಎಪಿ, "ಅಮಿತ್ ಶಾ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಲು ಮುಂದಾದ ಎಎಪಿ ನಾಯಕಿ ಅತಿಶಿ ಅವರ ಮೇಲೆ ದೆಹಲಿ ಪೊಲೀಸರು ಹಲ್ಲೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ" ಎಂದು ತಿಳಿಸಿದೆ.
"ಉಳಿದ ಎಎಪಿ ಮುಖಂಡರಾದ ಸಂಜೀವ್ ಝಾ, ಕುಲದೀಪ್ ಕುಮಾರ್ ಹಾಗೂ ರೀತುರಾಜ್ ಗೋವಿಂದ್ ಅವರನ್ನು ಬಂಧಿಸಲಾಗಿದೆ" ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ದೆಹಲಿ ನಗರ ಪಾಲಿಕೆಯಲ್ಲಿ 2,400 ಕೋಟಿ. ರೂ.ಗಿಂತ ಹೆಚ್ಚು ಹಣ ದುರುಪಯೋಗ ಆಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಕಾರಣದಿಂದ ಅಮಿತ್ ಶಾ ಅವರ ನಿವಾಸದ ಮುಂದೆ ಧರಣಿ ಕೈಗೊಳ್ಳುವುದಾಗಿ ಶನಿವಾರ ಎಎಪಿ ತಿಳಿಸಿತ್ತು.