ರಾಮನಗರ, ಡಿ.13 (DaijiworldNews/PY): "ಎಂಎಲ್ಸಿ ಯೋಗೇಶ್ವರ್ ಅವರು ಚನ್ನಪಟ್ಟಣ ಕ್ಷೇತ್ರವನ್ನು ಹೇಗೆ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾನೆ. ನಾನು ಚನ್ನಪಟ್ಟಣದ ಶಾಸಕ. ನಾನೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ" ಎಂದು ಮಾಜಿ ಸಿಎಂ ಹೆಚ್ಡಿ.ಕುಮಾರಸ್ವಾಮಿ ಅವರು ಸಿ.ಪಿ.ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಚನ್ನಪಟ್ಟಣ ತಾಲೂಕಿನ ಎಷ್ಟು ಮಂದಿಗೆ ತೆಂಗಿನ ದುಡ್ಡು ಕೊಟ್ಟಿದ್ದಾನೋ ಇಲ್ಲವೋ ತಿಳಿದಿಲ್ಲ. ಯೋಗೇಶ್ವರ್ ಎಷ್ಟು ಮಂದಿಗೆ ಟೊಪ್ಪಿ ಹಾಕಿ ಬಂದಿದ್ದಾನೆ ಎಂದು ನನಗೆ ತಿಳಿದಿದೆ" ಎಂದರು.
"ಯೋಗೇಶ್ವರ್ ಅವರು ರಾಜಕೀಯ ಬರುವುದಕ್ಕು ಮುನ್ನವೇ ಅವರ ಪರಿಚಯವಿತ್ತು. ನಾನು ಚನ್ನಪಟ್ಟಣದ ಹಳ್ಳಿಗಳ ಹೆಸರು ಹೇಳಬೇಕಾ?. ಇದೆಲ್ಲಾ ಆತನ ದುರಂಹಕಾರದ ಮಾತುಗಳು" ಎಂದು ಕಿಡಿಕಾರಿದರು.
"ಯೋಗೇಶ್ವರ್ ಗೇಟ್ ಕೀಪರ್ ಆಗಿ ಕೆಲಸ ಮಾಡಿಕೊಂಡಿದ್ದ. ಎಂಎಲ್ಎಗಳು ಇವನನ್ನು ನೋಡಿ ಬಂದಿದ್ದಾರಾ?. ಅಧಿಕಾರ ನಡೆಸುವುದನ್ನು ನಾನು ಯೋಗೇಶ್ವರ್ನ್ನು ನೋಡಿ ಕಲಿಯಬೇಕಾ?" ಎಂದು ಕೇಳಿದರು.
"ಚನ್ನಪಟ್ಟಣದಲ್ಲಿ ಯಾವುದೇ ಕೆಲಸ-ಕಾರ್ಯವಾಗಬೇಕಿದ್ದರೆ ನನ್ನ ಅಡಿಯಲ್ಲೇ ನಡೆಯಬೇಕು. ಯಾವ ಕ್ಷೇತ್ರದಿಂದ ಯೋಗೇಶ್ವರ್ ಎಂಎಲ್ಸಿ ಆಗಿದ್ದಾರೆ. ಸಿನಿಮಾ ಕ್ಷೇತ್ರದಿಂದ ಎಂಎಲ್ಸಿಯಾಗಿ ಆಯ್ಕೆಯಾಗಿದ್ದು. ಅವರು ಸಿನಿಮಾ ರಂಗದವರ ಕಷ್ಟ-ಸುಖ ನೋಡಿಕೊಳ್ಳಲಿ" ಎಂದರು.