ಜೈಪುರ, ಡಿ.13 (DaijiworldNews/PY): "ಮಾತುಕತೆಯ ಸಂದರ್ಭ ರೈತರ ಪರವಾಗಿ ತೀರ್ಮಾನ ಕೈಗೊಳ್ಳದಿದ್ದಲ್ಲಿ ಎನ್ಡಿಎಯಿಂದ ಹೊರ ಬರುತ್ತೇವೆ" ಎಂದು ಬಿಜೆಪಿ ಮಿತ್ರ ಪಕ್ಷ ಲೋಕತಾಂತ್ರಿಕ್ ಪಕ್ಷದ ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದಾರೆ.
ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರಾಜಸ್ಥಾನದಲ್ಲಿ ಶನಿವಾರ ರೈತರು ಹಲವು ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ಮಿತ್ರ ಪಕ್ಷ ಲೋಕತಾಂತ್ರಿಕ್ ಪಕ್ಷದ (ಆರ್ಎಲ್ಪಿ) ಸಂಸದ ಹನುಮಾನ್ ಬೆನಿವಾಲ್ ಅವರು ಸಹ ಪಾಲ್ಗೊಂಡಿದ್ದಾರೆ.
ನೂತನ ಕೃಷಿ ಕಾನೂನುಗಳನ್ನು ರೈತ ವಿರೋಧಿ ಎಂದಿರುವ ಬೆನಿವಾಲ್ ಅವರು, "ರೈತರ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಕಾಳಜಿ ಇದ್ದದ್ದೇ ಆದಲ್ಲಿ ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ಅವರು ಜಾರಿ ಮಾಡಬೇಕು" ಎಂದಿದ್ದಾರೆ.
"ಮೂರು ಮಸೂದೆಗಳನ್ನು ರೂಪಿಸಿದ ವೇಳೆ ಬಿಜೆಪಿ ಯಾರೊಂದಿಗೂ ಕೂಡಾ ಸಮಾಲೋಚನೆ ನಡೆಸಿಲ್ಲ. ನಾವೂ ಕೂಡಾ ರೈತರ ಮಕ್ಕಳು. ರೈತರಿಗೆ ಸಂಬಂಧಿಸಿದಂತೆ ಇಂತಹ ಮಸೂದೆಯನ್ನು ರೂಪುಸುತ್ತಿದ್ದೇವೆ ಎಂದು ನಮಗೆ ಬಿಜೆಪಿ ತಿಳಿಸಬೇಕಿತ್ತು. ಆದರೆ, ಈ ಮಸೂದೆಗಳನ್ನು ರೂಪಿಸಿದವರು ಯಾರು ಎಂದು ಗೊತ್ತಲ್ಲ. ಮಸೂದೆಗಳನ್ನು ರೂಪಿಸಿದರು, ಅಂಗೀಕಾರ ಮಾಡಿದರು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.