ಕಾರವಾರ, ಡಿ.13 (DaijiworldNews/HR): ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದ ವಿದೇಶಿ ದಂಪತಿಗಳು ಲಾಕ್ಡೌನ್ನಿಂದಾಗಿ ತಮ್ಮ ದೇಶಕ್ಕೆ ಮರಳಲು ಸಾಧ್ಯವಾಗದಿದ್ದಾಗ ಸಾವಯವ ವಿಧಾನಗಳನ್ನು ಬಳಸಿಕೊಂಡು ತರಕಾರಿಗಳನ್ನು ಬೆಳೆಸಿ ಇತರರಿಗೆ ಮಾದರಿಯಾಗಿದ್ದಾರೆ.
ಇಟಲಿಯ ಮೌರಿಯಾ ಮತ್ತು ಪೋಲೆಂಡ್ನ ಜಾಸ್ಮಿನ್ ಅವರು ಗೋಕರ್ಣದಲ್ಲಿರುವ ತಮ್ಮ ವಸತಿಗೃಹದ ಪಕ್ಕದಲ್ಲಿದ್ದ ಭೂಮಿಯಲ್ಲಿ ತರಕಾರಿಗಳನ್ನು ಬೆಳೆದಿದ್ದಾರೆ. ಲಾಕ್ಡೌನ್ ಆಗಿದ್ದರಿಂದ ವೀಸಾ ಸಿಗದ ಕಾರಣ ಅವರಿಗೆ ತಮ್ಮ ದೇಶಗಳಿಗೆ ಹಿಂತಿರುಗಲು ಸಾಧ್ಯವಾಗಲಿಲ್ಲ.
ಕಳೆದ ಆರು ವರ್ಷಗಳಿಂದ ಇಟಾಲಿಯನ್ ಪ್ರವಾಸಿ ಮೌರಿಯಾ ಪ್ರತಿ ವರ್ಷ ಗೋಕರ್ಣಕ್ಕೆ ಭೇಟಿ ನೀಡುತ್ತಿದ್ದಾರೆ. ಅದರಂತೆ, ಅವರು ಕಳೆದ ವರ್ಷವೂ ಬಂದಿದ್ದರು ಮತ್ತು ಮೂರು ತಿಂಗಳು ಅಲ್ಲಿಯೇ ಇದ್ದರು. ಈ ಬಾರಿ ಬಂದು ಹೊರಡಲು ಸಿದ್ದರಾಗಿದ್ದಾಗ ಲಾಕ್ಡೌನ್ ಘೋಷಿಸಲಾಗಿ ವೀಸಾ ಸಿಗದ ಕಾರಣ ಹಿಂತಿರುಗಲು ಸಾಧ್ಯವಾಗಲಿಲ್ಲ.
ಸುಮ್ಮನೆ ಕುಳಿತುಕೊಳ್ಳುವ ಬದಲು ಮೌರಿಯಾ ತನ್ನ ವಸತಿಗೃಹದ ಪಕ್ಕದಲ್ಲಿರುವ ಭೂಮಿಯಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದ್ದು, ಇನ್ನೂ ಎರಡು ತಿಂಗಳಲ್ಲಿ ಅದರಿಂದ ಫಲವತ್ತತೆಯನ್ನು ಪಡೆಯಲಿದ್ದಾರೆ.
ದಂಪತಿಗಳು ಟೊಮೆಟೊ, ಪಾಲಕ್, ಹಸಿರು ಮೆಣಸಿನಕಾಯಿ ಮತ್ತು ಇತರ ತರಕಾರಿಗಳನ್ನು ಬೆಳೆದಿದ್ದಾರೆ. ಕೃಷಿಯಲ್ಲಿನ ಆಸಕ್ತಿಯ ಬಗ್ಗೆ ಮಾತನಾಡಿದ ಮೌರಿಯಾ, "ನಾನು ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದೇನೆ ಮತ್ತು ನನ್ನ ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ಕೃಷಿ ಮಾಡುತ್ತಿದ್ದೆ. ಹಾಗಾಗಿ ನಾನು ಹೋಗಲು ಸಾಧ್ಯವಾಗದ ಕಾರಣ ಇಲ್ಲಿಯೂ ಮಾಡುತ್ತಿದ್ದೇನೆ" ಎಂದರು.
ತನ್ನ ತಾಯ್ನಾಡಿಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರವಾಗಿದೆಯೆ ಎಂದು ಕೇಳಿದಾಗ, "ನನಗೆ ತುಂಬಾ ಬೇಸರವಾಗುತ್ತಿದೆ, ಪ್ರತಿ ತಿಂಗಳು ನಾನು ನನ್ನ ವೀಸಾವನ್ನು ನವೀಕರಿಸಬೇಕಾಗಿದೆ. ಪೊಲೀಸರೂ ಸಹ ಇದರ ಬಗ್ಗೆ ವಿಚಾರಿಸುತ್ತಾರೆ. ಕೆಲವೊಮ್ಮೆ ನನಗೆ ತುಂಬಾ ದುಖಃವಾಗುತ್ತದೆ ಅದಕ್ಕಾಗಿಯೇ ಅದನ್ನು ಮರೆಯುವುದಕ್ಕಾಗಿ ನಾನು ತರಕಾರಿಗಳನ್ನು ಬೆಳೆಯುತ್ತೇನೆ. ಇಲ್ಲಿ ಲಭ್ಯವಿರುವ ಸಾವಯವ ಗೊಬ್ಬರವನ್ನು ಬಳಸುತ್ತೇನೆ. ನನ್ನ ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ಗೊಬ್ಬರವನ್ನು ತಯಾರಿಸಿದ್ದೇನೆ ಮತ್ತು ತರಕಾರಿಗಳನ್ನು ಬೆಳೆಯಲು ಬಳಸಿದ್ದೇನೆ ಎಂದರು."
ಇನ್ನು ದಂಪತಿಗಳು ನಕ್ಷತ್ರಗಳು, ಗ್ರಹಗಳು ಮತ್ತು ಚಂದ್ರನ ಚಲನೆಯನ್ನು ಆಧರಿಸಿ ಹವಾಮಾನದ ಕೋಷ್ಟಕವನ್ನು ಸಿದ್ಧಪಡಿಸಿ ಸಮಯದ ಹವಾಮಾನಕ್ಕೆ ತಕ್ಕಂತೆ ತರಕಾರಿಗಳನ್ನು ಬೆಳೆಯುತ್ತಾರೆ.