ನವದೆಹಲಿ, ಡಿ.12 (DaijiworldNews/MB) : ''ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ದ ಕಳೆದ 17 ದಿನಗಳಿಂದ ಪ್ರತಿಭಟನೆ ನಡೆಸುತ್ತಲಿರುವ ರೈತರು ಸರ್ಕಾರದೊಂದಿಗೆ ಮಾತುಕತೆ ನಡೆಸಲು ನಾವು ಸಿದ್ದರಿದ್ದೇವೆ, ಆದರೆ ಮೊದಲು ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆಸಬೇಕು ಎಂದು ಹೇಳಿದ್ದು ಡಿಸೆಂಬರ್ 14ರಂದು ರೈತ ಸಂಘದ ಮುಖಂಡರು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ'' ಎಂದು ಹೇಳಿದರು.
ಈ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿರುವ ರೈತ ಮುಖಂಡ ಕನ್ವಾಲ್ಪ್ರೀತ್ ಸಿಂಗ್ ಪನ್ನು, ''ರಾಜಸ್ಥಾನದ ಶಹಜಹಾನ್ಪುರದಿಂದ ಜೈಪುರ-ದೆಹಲಿ ಹೆದ್ದಾರಿ ಮೂಲಕ ರವಿವಾರ ಬೆಳಗ್ಗೆ 11 ಗಂಟೆಗೆ ಸಾವಿರಾರು ರೈತರು ತಮ್ಮ 'ದೆಹಲಿ ಚಲೋ' ಮೆರವಣಿಗೆ ಪ್ರಾರಂಭವಾಗಲಿದೆ. ಡಿಸೆಂಬರ್ 14ರಂದು ರೈತ ಸಂಘದ ಮುಖಂಡರು ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ'' ಎಂದು ತಿಳಿಸಿದರು.
''ಇನ್ನು ಸರ್ಕಾರ ಈ ಮೂರು ಕಾಯ್ದೆಗಳ ರದ್ದುಗೊಳಿಸುವ ಬಗ್ಗೆ ಮಾತುಕತೆ ನಡೆಸದಿದ್ದರೆ, ಪ್ರತಿಭಟನೆ ಮತ್ತಷ್ಟು ತೀವ್ರಗೊಳಿಸಲಾಗುವುದು. ದೇಶದ ಇತರೆ ಭಾಗದ ರೈತರು ಕೂಡಾ ಸೇರಲಿದ್ದಾರೆ'' ಎಂದು ಎಚ್ಚರಿಕೆ ನೀಡಿದ ಅವರು, ''ಹೋರಾಟವನ್ನು ಹತ್ತಿಕ್ಕುವ ಯತ್ನ ನಡೆಯುತ್ತಿದೆ. ಆದರೆ ನಾವು ಯಾವುದಕ್ಕೂ ಹಿಂಜರಿಯಲಾರೆವು. ಮೊದಲು ಕಾಯ್ದೆ ರದ್ದತಿ ಬಗ್ಗೆ ಮಾತುಕತೆ ನಡೆಸಿ ಬಳಿಕ ಇತರೆ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಬೇಕು'' ಎಂದು ಆಗ್ರಹಿಸಿದರು.