ಬೆಂಗಳೂರು, ಡಿ.12 (DaijiworldNews/MB) : ''ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ರವಿವಾರ ಸಾರ್ವಜನಿಕರಿಗೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗುವುದು'' ಎಂದು ಸಾರಿಗೆ ಸಚಿವ ಉಪ ಮುಖ್ಯಮಂತ್ರಿಯೂ ಆಗಿರುವ ಲಕ್ಷ್ಮಣ ಸವದಿ ತಿಳಿಸಿದರು.
ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ರವಿವಾರದಿಂದ ಸರ್ಕಾರಿ ಬಸ್ ಪ್ರಯಾಣ ದರದಲ್ಲೇ ಖಾಸಗಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು'' ಎಂದು ಹೇಳಿದರು.
''ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕೆಂಬ ಉದ್ದೇಶ ಇಟ್ಟುಕೊಂಡು ಎಲ್ಲಿ ಹೋರಾಟ ನಡೆದರೂ ಹೋಗುತ್ತಾರೆ. ಈಗ ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಅವರು ಅವರಷ್ಟಕ್ಕೆ ರಾಜಕೀಯ ಮಾಡಲಿ, ನಾವು ಜನರ ಸಮಸ್ಯೆಯ ಬಗ್ಗೆ ಗಮನ ನೀಡುತ್ತೇವೆ'' ಎಂದು ಹೇಳಿದರು.
''ನಾವು ಪ್ರತಿಭಟನಾ ನಿರತ ನೌಕರರೊಂದಿಗೆ ಚರ್ಚಿಸಲು ಸಿದ್ದ'' ಎಂದು ಹೇಳಿದ ಅವರು, ''ನಾನು ರಾತ್ರಿ 12 ಗಂಟೆವರೆಗೂ ಕಾಯಲು ಸಿದ್ದನಿದ್ದೇನೆ. ಹಾಗಾಗಿ ನೀವು ಮೊದಲು ಕೆಲಸಕ್ಕೆ ಹಾಜರಾಗಿ ಬಳಿಕ ಮಾತುಕತೆ ನಡೆಸಲು ಬನ್ನಿ. ಸರ್ಕಾರ ನೌಕರರ ಅಹವಾಲುಗಳನ್ನು ಕೇಳಲು ಸಿದ್ದವಿದೆ'' ಎಂದರು.