ಜೈಪುರ, ಡಿ.12 (DaijiworldNews/HR): ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರ ನಡುವಣ ಭಿನ್ನಾಭಿಪ್ರಾಯದಿಂದಾಗಿ ಬಿಜೆಪಿ ತೊರೆದಿದ್ದ ರಾಜಸ್ಥಾನದ ಹಿರಿಯ ರಾಜಕಾರಣಿ ಘನಶ್ಯಾಂ ತಿವಾರಿ ಇಂದು ಮತ್ತೆ ಮರಳಿ ಬಿಜೆಪಿ ಸೇರಿದ್ದಾರೆ.
ಇಂದು ಪಕ್ಷವು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಅವರ ಸಮ್ಮುಖದಲ್ಲಿ ಘನಶ್ಯಾಂ ತಿವಾರಿ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಕುರಿತು ಪಕ್ಷ ಸೇರ್ಪಡೆಯ ಬಳಿಕ ಮಾತನಾಡಿದ ಅವರು,"ಸುದೀರ್ಘ ಸಮಯದ ಬಳಿಕ ಈ ವೇದಿಕೆಯಲ್ಲಿ ಮಾತನಾಡಲು ಅವಕಾಶ ಪಡೆದಿದ್ದೇನೆ. ಪಕ್ಷಕ್ಕೆ ಸೇರುವುದಾಗಿ ನಾನು ಬರೆದ ಪತ್ರವನ್ನು ಪರಿಗಣಿಸಿದ ಪಕ್ಷದ ನಾಯಕತ್ವಕ್ಕೆ ಧನ್ಯವಾದಗಳು" ಎಂದರು.
ಇನ್ನು "ಮುಂದಕ್ಕೆ ಬಿಜೆಪಿಯ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಬದ್ಧನಾಗಿರುತ್ತೇನೆ ಹಾಗೂ ಮನಸ್ಪೂರ್ವಕವಾಗಿ ಬಿಜೆಪಿಯಲ್ಲಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ಬೇರೆ ಪಕ್ಷ ರಚಿಸಿದ್ದೆ" ಎಂದು ಹೇಳಿದ್ದಾರೆ.