ನವದೆಹಲಿ,ಡಿ.12 (DaijiworldNews/HR): ದೆಹಲಿಯಲ್ಲಿ ಎರಡು ಗುಂಪುಗಳ ಮಧ್ಯೆ ಜಗಳ ನಡೆಯುತ್ತಿದ್ದಾಗ ಪರಿಸ್ಥಿಯನ್ನು ಸಮದೂಗಿಸಲು ಮಧ್ಯಪ್ರವೇಶಿಸಿದ ವ್ಯಕ್ತಿಯೊಬ್ಬರಿಗೆ 22 ಬಾರಿ ಚೂರಿಯಿಂದ ಇರಿದು ಹತ್ಯೆಗೈದಿರುವ ಘಟನೆ ನಡೆದಿದೆ.
ಹತ್ಯೆಯಾದ ವ್ಯಕ್ತಿಯನ್ನು ನೀರಜ್ ಎಂದು ಗುರುತಿಸಲಾಗಿದೆ.
ನೀರಜ್ನ ಸ್ನೇಹಿತರಾದ ಮುಖೇಶ್ ಮತ್ತು ರಾಕೇಶ್ ಇಬ್ಬರು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕೃಷ್ಣ ಮತ್ತು ರವಿ ಎಂಬಿಬ್ಬರು ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ ಸೆಕ್ಯುರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಅವರಿಬ್ಬರನ್ನು ಕೆಲಸದಿಂದ ವಜಾ ಮಾಡಿ, ಮುಕೇಶ್ ಮತ್ತು ರಾಕೇಶ್ ನನ್ನು ಸೆಕ್ಯುರಿಟಿ ಕೆಲಸಕ್ಕೆ ನಿಯೋಜಿಸಿದ್ದರಿಂದ ವೈಮನಸ್ಸು ಬೆಳೆದಿತ್ತು. ಈ ಹಿನ್ನೆಲೆಯಲ್ಲಿ ಮುಕೇಶ್ ಮತ್ತು ರಾಕೇಶ್ ಮೇಲೆ ಹಲ್ಲೆ ನಡೆಸಲು ಇಬ್ಬರು ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.
ಮುಕೇಶ್ ಮತ್ತು ರಾಕೇಶ್ ಆಸ್ಪತ್ರೆಯಿಂದ ಕೆಲಸ ಮುಗಿಸಿ ಹೊರಡುವಾಗ ತಮ್ಮ ಗೆಳೆಯ ನೀರಜ್ ಜತೆಗೂಡಿ ಹೊರಟಿದ್ದು, ದಾರಿಯಲ್ಲಿ ಹೋಗುತ್ತಿದ್ದ ಇಬ್ಬರನ್ನು ಕೃಷ್ಣ ಮತ್ತು ರವಿ ತಡೆದು ನಿಲ್ಲಿಸಿದ್ದರು. ಈ ಸಂದರ್ಭ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಬಳಿಕ ನೀರಜ್ ಮಧ್ಯಪ್ರವೇಶಿಸಿ ಜಗಳ ತಡೆಯಲು ಪ್ರಯತ್ನಿಸುತ್ತಿರುವಾಗಲೇ 22 ಬಾರಿ ಚೂರಿಯಿಂದ ಇರಿದಿರುವ ಘಟನೆ ನಡೆದಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.