ಬಾಗಲಕೋಟೆ, ಡಿ.12 (DaijiworldNews/PY): "ಗೋಹತ್ಯೆ ನಿಷೇಧ ಆರ್ಎಸ್ಎಸ್ನವರ ಕಾರ್ಯಕ್ರಮ. ಯಡಿಯೂರಪ್ಪ ಅವರದಲ್ಲ. ಅವರೇ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ಕಾಯ್ದೆ ಜಾರಿಗೊಳಿಸಿದ್ದಾರೆ" ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಗೋಹತ್ಯೆ ನಿಷೇಧಕ್ಕೆ ನಮ್ಮ ವಿರೋಧವಿಲ್ಲ. ಆದರೆ ಗೋಹತ್ಯೆ ಕಾಯ್ದೆ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿದ್ದೀರಾ?" ಎಂದು ಕೇಳಿದರು.
"ರೈತರು ವಯಸ್ಸಾದ ಜಾನುವಾರುಗಳನ್ನು ಇಟ್ಟುಕೊಂಡು ಏನು ಮಾಡಬೇಕು. ಕಾನೂನಿಕ ಪ್ರಕಾರ ಅವುಗಳನ್ನು ಗೋಶಾಲೆಯಲ್ಲಿರಬೇಕು. ಆದರೆ, ಅದಕ್ಕೆ ರೈತರು ಹಣ ನೀಡಬೇಕು ಎಂದು ಕೇಳುತ್ತಾರೆ. ಇದಕ್ಕೆ ರೈತರು ಹಣ ಕೊಡುವ ಬದಲಿಗೆ ಸರ್ಕಾರವೇ ಖರೀದಿ ಮಾಡಲಿ" ಎಂದರು.
"ನಾನು ಏಕೆ ಸಚಿವ ಆರ್.ಅಶೋಕ್ ಅವರಿಗೆ ರಾಸುಗಳನ್ನು ಕಳುಹಿಸಬೇಕು?. ಅವರು ರೈತರ ಬಳಿ ಹೋಗಿ ಖರೀದಿ ಮಾಡಲಿ" ಎಂದು ಹೇಳಿದರು.
"ಸಗಣಿ ಎತ್ತುವುದು, ಗಂಜಲ ಕುಡಿಸುವುದು, ಹಾಲು ಹಾಕುವುದು ಇವೆಲ್ಲಾ ರೈತರು ಮಾಡುವುದು. ಆದರೆ, ವಿಧಾನಸೌಧದ ಎದುರು ಹಸುವನ್ನು ನಿಲ್ಲಿಸಿ ಪೂಜೆ ಮಾಡುವುದು ಇವರದ್ದೇನು ಕೆಲಸ" ಎಂದು ಲೇವಡಿ ಮಾಡಿದರು.
"ಗೋವುಗಳ ಮೇಲೆ ಪ್ರೀತಿ ಇದ್ದದ್ದೇ ಆದಲ್ಲಿ ಮೊದಲು ಕೇಂದ್ರ ಸರ್ಕಾರ ಗೋ ಮಾಂಸ ರಫ್ತು ಮಾಡುವುದನ್ನು ನಿಲ್ಲಿಸಬೇಕು. ಗೋಮಾಂಸ ರಫ್ತು ಮಾಡುವ ಲಾಲ್, ಗಫೂರ್ಗಳು ಎಲ್ಲಾ ಬಿಜೆಪಿ ಬೆಂಬಲಿಗರೇ" ಎಂದರು.