ಬೆಂಗಳೂರು, ಡಿ.12 (DaijiworldNews/MB) : ''ಗೋ ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಜೆಡಿಎಸ್ ಸ್ಪಷ್ಟವಾಗಿ ವಿರೋಧ ಮಾಡುತ್ತದೆ'' ಎಂದು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಈ ಬಗ್ಗೆ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ''ಈ ಕಾಯ್ದೆಯಲ್ಲಿ ಹಲವಾರು ಸಮಸ್ಯೆಯಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ವಿರೋಧ ಮಾಡುತ್ತದೆ ಎಂಬ ಕಾರಣಕ್ಕೆ ವಿಧಾನ ಪರಿಷತ್ನಲ್ಲಿ ಈ ಕಾಯ್ದೆಯನ್ನು ಬಿಜೆಪಿ ಮಂಡಿಸಿಲ್ಲ'' ಎಂದು ಹೇಳಿದರು.
''ನಾವು ಈಗಲೂ ಈ ಮಸೂದೆಯನ್ನು ವಿರೋಧಿಸುತ್ತೇವೆ. ಮುಂದೆಯೂ ವಿರೋಧಿಸುತ್ತೇವೆ. ಅದರಲ್ಲಿ ಯಾವುದೇ ಬದಲಾವಣೆಯಿಲ್ಲ. ನಾವೆಂದಿಗೂ ರೈತರ ಬದುಕನ್ನು ಒತ್ತೆಯಿಟ್ಟು ಈ ರೈತ ವಿರೋಧಿ ಮಸೂದೆಗಳಿಗೆ ಬೆಂಬಲಿಸಲ್ಲ'' ಎಂದರು.
''ಈ ಮಸೂದೆಯು ಜಾನುವಾರುಗಳ ಸಾಗಾಣೆ ಮಾಡುವವರಿಗೆ ಯಾರು ಬೇಕಾದರೂ ಕಿರುಕುಳ ನೀಡುವ ಅವಕಾಶ ನೀಡುತ್ತದೆ. ನಾವು ಈ ಅನೈತಿಕ ಪೊಲೀಸ್ಗಿರಿಗೆ ಅವಕಾಶ ನೀಡಲಾರೆವು'' ಎಂದು ಹೇಳಿದರು.