ದಾವಣಗೆರೆ, ಡಿ.12 (DaijiworldNews/MB) : ''ಕುರುಬರ ಎಸ್ಟಿ ಹೋರಾಟದಲ್ಲಿ ಆರ್ಎಸ್ಎಸ್ನ ಪಾತ್ರವಿದೆ ಎಂದು ಹೇಳುತ್ತಿರುವ ಎಡಪಂಥೀಯರಿಗೆ ಆರ್ಎಸ್ಎಸ್ ಅನ್ನು ಕಂಡರೆ ಹೆದರಿಕೆ'' ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಕುರುಬರ ಎಸ್ಟಿ ಹೋರಾಟದಲ್ಲಿ ಆರ್ಎಸ್ಎಸ್ನ ಯಾವುದೇ ಪಾತ್ರವಿಲ್ಲ. ಈ ಹೋರಾಟವು ಕಾಗಿನೆಲೆ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದೆ. ಆದರೂ ಎಡಪಂಥೀಯರು ಆರ್ಎಸ್ಎಸ್ನ ಮೇಲೆ ತಮಗಿರುವ ಭಯದಿಂದ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ'' ಎಂದರು.
''ಈ ಹೋರಾಟವು ಯಾವುದೇ ಪಕ್ಷದಿಂದ ನಡೆಯುತ್ತಿಲ್ಲ. ಇದು ಪಕ್ಷಾತೀತ ಹೋರಾಟ. ಎಚ್.ಎಂ. ರೇವಣ್ಣ, ಬಂಡೆಪ್ಪ ಕಾಶೆಂಪೂರ, ವಿಶ್ವನಾಥ್ ಹೀಗೆ ಎಲ್ಲಾ ಪಕ್ಷದವರು ಈ ಹೋರಾಟದಲ್ಲಿ ಇದ್ದಾರೆ'' ಎಂದು ಸ್ಪಷ್ಟಪಡಿಸಿದರು.
''ಆರ್ಎಸ್ಎಸ್ ನನ್ನಂಥ ಕೋಟ್ಯಂತರ ದೇಶಭಕ್ತರನ್ನು ಸೃಷ್ಟಿ ಮಾಡಿದೆ ಎಂದು ಹೇಳಿದ ಅವರು, ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿ ಕಾಣುವಂತೆ ಈ ಎಡಪಂಥೀಯರಿಗೆ ಎಲ್ಲದರಲ್ಲೂ ಆರ್ಎಸ್ಎಸ್ ಕಾಣುತ್ತದೆ'' ಎಂದು ಲೇವಡಿ ಮಾಡಿದರು.
ಇನ್ನು ಈ ಸಂದರ್ಭದಲ್ಲೇ ಮಾತನಾಡಿದ ಕಾಗಿನೆಲೆ ನಿರಂಜನಾನಂದ ಪುರಿ ಸ್ವಾಮೀಜಿ, ''ಅಷ್ಟಕ್ಕೂ ನಾವು ಸಿದ್ದರಾಮಯ್ಯನವರ ಅನುಮತಿ ಪಡೆದು ಈ ಹೋರಾಟ ನಡೆಸುತ್ತಿದ್ದು ಅವರು ಯಾವ ಸಂದರ್ಭದಲ್ಲಿ ಈ ಹೋರಾಟಕ್ಕೆ ಬಂದರೂ ನಾವು ಸ್ವಾಗತಿಸುತ್ತೇವೆ'' ಎಂದು ತಿಳಿಸಿದರು.