ನವದೆಹಲಿ, ಡಿ.12 (DaijiworldNews/MB) : "ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಕೃಷಿ ಕಾಯ್ದೆಗಳು ಕೃಷಿ ಮತ್ತು ಇತರೆ ಸಂಬಂಧಿತ ಕ್ಷೇತ್ರಗಳ ನಡುವಿನ ಅಡೆತಡೆಗಳನ್ನು ಕಡಿತಗೊಳಿಸಲು ಸಹಾಯ ಮಾಡುತ್ತದೆ. ತಾಂತ್ರಿಕ ಪ್ರಗತಿ ಮತ್ತು ಹೂಡಿಕೆಗಳಿಂದ ಲಾಭ ಪಡೆಯುವ ರೈತರಿಗೆ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ. ಒಂದು ವಲಯವು ಬೆಳೆದಾಗ, ಅದರ ಪರಿಣಾಮವು ಇತರ ಹಲವಾರು ಕ್ಷೇತ್ರಗಳ ಮೇಲೆ ಬೀರುತ್ತದೆ. ಕೃಷಿ ಸುಧಾರಣೆಗಳು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಕೃಷಿ ಕಾಯ್ದೆಗಳ ವಿರುದ್ದ ದೇಶದಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸುತ್ತಿದ್ದು ಈ ಪ್ರತಿಭಟನೆಯು 17 ನೇ ದಿನಕ್ಕೆ ಕಾಲಿರಿಸಿದೆ. ಮೂರು ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ರೈತರು ಒತ್ತಾಯಿಸಿದ್ದಾರೆ. ಕೇಂದ್ರ ಹಾಗೂ ರೈತ ಮುಖಂಡರ ನಡುವೆ ನಡೆದ ಎಲ್ಲಾ ಸುತ್ತಿನ ಮಾತುಕತೆಗಳು ಕೂಡಾ ವಿಫಲವಾಗಿದೆ. ಈ ನಡುವೆ ಪ್ರಧಾನಿ ಮೋದಿಯವರು ಈ ಹೇಳಿಕೆಯನ್ನು ನೀಡಿದ್ದಾರೆ.
ಪ್ರಧಾನಿ ಮೋದಿ ಶನಿವಾರ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ 93 ನೇ ವರ್ಚುವಲ್ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದರು. ಈ ವೇಳೆ ಅವರು ನಿರ್ದಿಷ್ಟವಾಗಿ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ ಮಾತನಾಡಿದರು.
"ಕೃಷಿ ಮತ್ತು ಕೈಗಾರಿಕೆಗಳ ನಡುವೆ ಅನಗತ್ಯ ಗೋಡೆ ನಿರ್ಮಾಣವಾದಾಗ ಏನಾಗಬಹುದು ಎಂದು ಊಹಿಸಿ. ಈ ಗೋಡೆ ನಿರ್ಮಾಣವಾದಾಗ ಯಾವುದೇ ಉದ್ಯಮವು ವೇಗವಾಗಿ ಬೆಳೆಯುವುದಿಲ್ಲ" ಹೇಳಿದರು.
"ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಾದ ಕೃಷಿ ಮೂಲಸೌಕರ್ಯ, ಆಹಾರ ಸಂಸ್ಕರಣೆ, ಸಂಗ್ರಹಣೆ ಮೊದಲಾದವುಗಳ ನಡುವೆ ಗೋಡೆಗಳು ನಿರ್ಮಾಣವಾಗಿದೆ. ಈ ಕೃಷಿ ಕಾಯ್ದೆಗಳ ಮೂಲಕ ಈ ಗೋಡೆಗಳನ್ನು ತೆಗೆದುಹಾಕಲಾಗುತ್ತಿದೆ. ಈ ಸುಧಾರಣೆಗಳು ರೈತರಿಗೆ ಹೊಸ ಮಾರುಕಟ್ಟೆಗಳು, ತಂತ್ರಜ್ಞಾನದ ಅನುಕೂಲಗಳು ಮತ್ತು ಹೂಡಿಕೆಗಳನ್ನು ಸೆಳೆಯಲು ಸಹಾಯ ಮಾಡುತ್ತದೆ. ನನ್ನ ದೇಶದ ರೈತರು ಈ ಎಲ್ಲದರಿಂದ ಹೆಚ್ಚಿನ ಲಾಭ ಪಡೆಯುತ್ತಾರೆ" ಎಂದು ಒತ್ತಿ ಹೇಳಿದರು.
''ಭಾರತದ ಆರ್ಥಿಕತೆಯಲ್ಲಿ ಬೇಕಾಗಿರುವುದು ಗೋಡೆಗಳಲ್ಲ ಆದರೆ ಹೆಚ್ಚು ಹೆಚ್ಚು ಸೇತುವೆಗಳ ನಿರ್ಮಾಣ ಪರಸ್ಪರ ಕ್ಷೇತ್ರಗಳ ಬೆಂಬಲಕ್ಕೆ ಸಹಾಯ ಮಾಡುತ್ತದೆ'' ಎಂದು ಪರೋಕ್ಷವಾಗಿ ಕೃಷಿ ಹಾಗೂ ಇತರೆ ಕ್ಷೇತ್ರಗಳ ನಡುವೆ ನೇರ ಸಂಪರ್ಕ ಅತ್ಯಗತ್ಯ ಎಂದರು.