ನವದೆಹಲಿ, ಡಿ.12 (DaijiworldNews/PY): ಕೇಂದ್ರ ಸರ್ಕಾರ ಅಂಗೀಕಾರ ಮಾಡಿದ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ರೈತರು ಪ್ರತಿಭಟನೆ ನಡೆಸುತ್ತಿದ್ದು, ಡಿ.12 ರ ಶನಿವಾರ ರೈತರು ದೆಹಲಿ-ಜೈಪುರ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಎಚ್ಚರಿಕೆ ನೀಡಿರುವ ನಿಟ್ಟಿನಲ್ಲಿ ಪೊಲೀಸರು ದೆಹಲಿಯ ಗಡಿಭಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಕಳೆದ 16 ದಿನಗಳಿಂದ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯನ್ನು ತೀವ್ರಗೊಳಿಸುವ ಎಚ್ಚರಿಕೆಯನ್ನು ಕೂಡಾ ನೀಡಿದ್ದರು.
ಈ ಹಿನ್ನೆಲೆ ಪೊಲೀಸರು ದೆಹಲಿಯ ಗಡಿಯಲ್ಲಿ ಭದ್ರತೆ ಹೆಚ್ಚಿಸಿದ್ದು, ಬ್ಯಾರಿಕೇಡ್ ಹಾಗೂ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಿದ್ದಾರೆ.
ಪ್ರತಿಭಟನೆಯಿಂದ ಪ್ರಯಾಣಿಕರಿಗೆ ಯಾವುದೇ ರೀತಿಯಾದ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.