ಹೊಸದಿಲ್ಲಿ, ಡಿ.12 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಎಡಪಂಥೀಯರು ಮತ್ತು ಮಾವೋವಾದಿಗಳು ನುಸುಳಿದ್ದಾರೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ರೈತರ ಆತಂಕಗಳನ್ನು ನಿವಾರಿಸಲು ಸರ್ಕಾರ ತಯಾರಿದೆ, ಆದರೆ ಕೃಷಿ ತಿದ್ದುಪಡಿಗಳು ದೇಶಾದ್ಯಂತ ರೈತರಿಗೆ ಪ್ರಯೋಜವಾಗುವಂತಹದು. ರೈತ ಹೋರಾಟವನ್ನು ನಿಜವಾಗಿಯೂ ರೈತ ಮುಖಂಡರು ಮುನ್ನಡೆಸಿದ್ದರೆ, ಪರಿಹಾರ ಸಾಧ್ಯವಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮಾತುಕತೆಯೊಂದೇ ದಾರಿ. ಆದರೆ ಭರವಸೆಗಳನ್ನು ನೀಡಿದ ಬಳಿಕವೂ, ಅವರ ಆತಂಕಗಳನ್ನು ನಿವಾರಿಸಿದ ಬಳಿಕವೂ ಅವರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ಅರ್ಥವಿಲ್ಲ" ಎಂದರು.
ಇನ್ನು "ಈ ಕಾಯ್ದೆಯಿಂದ ರೈತರಿಗೆ ಉಪಯೋಗವಾಗುತ್ತದೆ. ಮೋದಿ ಸರ್ಕಾರ ಕೃಷಿ ಉತ್ಪನ್ನ ಖರೀದಿ ದ್ವಿಗುಣಗೊಳಿಸಿದ್ದು ಮಾತ್ರವಲ್ಲದೆ ಕನಿಷ್ಠ ಬೆಂಬಲ ಬೆಲೆಯನ್ನು ವೆಚ್ಚ ಮತ್ತು ಶೇಕಡ 50 ಎಂಬ ಸೂತ್ರಕ್ಕೆ ಹೆಚ್ಚಿಸಿದೆ" ಎಂದು ಹೇಳಿದ್ದಾರೆ.