ಬೆಂಗಳೂರು, ಡಿ.12 (DaijiworldNews/PY): "ಕಾಣದ ಕೈಗಳ ಪ್ರಭಾವವಿಲ್ಲದೆ ಇಂತಹ ಮನೆಹಾಳು ಕಾಯ್ಧೆ ತರಲು ಕೇಂದ್ರಕ್ಕೆ ಸಾಧ್ಯವೆ?. ಕೇಂದ್ರ ರೈತರ ತಾಳ್ಮೆ ಪರೀಕ್ಷಿಸುವ ಬದಲು ಸಮಸ್ಯೆ ಬಗೆಹರಿಸಲಿ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೇಂದ್ರ ತಂದಿರುವ 3 ಕೃಷಿ ಕಾಯ್ಧೆಗಳು ಯಾರ ಹಿತಕ್ಕೆ ತಂದ ಕಾಯ್ಧೆಗಳು ಎಂದು ತಿಳಿಯದಷ್ಟು ಮುಗ್ಧರಲ್ಲ ದೇಶದ ರೈತರು. ಸ್ವತಃ ರೈತರಿಗೆ ಬೇಡವಾದ ಕಾಯ್ಧೆಗಳ ಜಾರಿಗೆ ಸರ್ಕಾರದ ಇಷ್ಟೊಂದು ಹಠವೇಕೆ?. ಕಾಣದ ಕೈಗಳ ಪ್ರಭಾವವಿಲ್ಲದೆ ಇಂತಹ ಮನೆಹಾಳು ಕಾಯ್ಧೆ ತರಲು ಕೇಂದ್ರಕ್ಕೆ ಸಾಧ್ಯವೆ?ಕೇಂದ್ರ ರೈತರ ತಾಳ್ಮೆ ಪರೀಕ್ಷಿಸುವ ಬದಲು ಸಮಸ್ಯೆ ಬಗೆಹರಿಸಲಿ" ಎಂದಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸಾರಿಗೆ ನೌಕರರ ಮುಷ್ಕರದಿಂದ ಲಕ್ಷಾಂತರ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ಮುಷ್ಕರ ನಿರತರ ಮೇಲೆ ಕಾನೂನಿನ ಅಸ್ತ್ರ ಪ್ರಯೋಗಿಸುವ ಸಾರಿಗೆ ಸಚಿವರ ಮಾತು ಪ್ರಬುದ್ಧ ನಡೆಯಲ್ಲ. ಸರ್ಕಾರ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂಬ ಸರ್ವಾಧಿಕಾರಿ ಧೋರಣೆ ಬಿಟ್ಟು ಸಮಸ್ಯೆ ಬಗೆಹರಿಸುವತ್ತ ಚಿತ್ತ ಹರಿಸಲಿ" ಎಂದು ತಿಳಿಸಿದ್ದಾರೆ.
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಶನಿವಾರವೂ ಮುಂದುವರೆದಿದ್ದು, ಬಸ್ಗಳ ಸಂಚಾರ ಸ್ಥಗಿತಗೊಳಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಅಂಗೀಕಾರ ಮಾಡಿದ ಮೂರು ಕೃಷಿ ಸುಧಾರಣಾ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಎಂದು ಕಳೆದ 17 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಡಿ.12ರ ಶನಿವಾರ ರೈತರು ದೆಹಲಿ-ಜೈಪುರ ಹೆದ್ದಾರಿಯನ್ನು ನಿರ್ಬಂಧಿಸುವುದಾಗಿ ಹೇಳಿದ್ದಾರೆ.