ಚಾಮರಾಜನಗರ,ಡಿ.12 (DaijiworldNews/HR): ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಗೋಮಾಂಸ ರಪ್ತು ನಿಷೇಧಿಸಲಿ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ರಾಜ್ಯ ಸರ್ಕಾರ ಗೋಹತ್ಯಾ ನಿಷೇಧ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಅಂಗೀಕಾರ ಪಡೆದಿರುವುದು ಖಂಡನೀಯವಾಗಿದೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಮೊದಲು ಗೋಮಾಂಸ ರಫ್ತಿನಲ್ಲಿ ಭಾರತ 7-8ನೇ ಸ್ಥಾನದಲ್ಲಿದ್ದು ಇದೀಗ ಎರಡನೇ ಸ್ಥಾನದಲ್ಲಿರುವುದು ಬಿಜೆಪಿಯ ಗೋಮಾತೆಯ ಮೇಲಿನ ಕಾಳಜಿ ನಾಟಕ ಎಂಬುದನ್ನು ಸಾಬೀತು ಪಡಿಸುತ್ತದೆ" ಎಂದರು.
ಇನ್ನು ಗೋ ಹತ್ಯೆ ಕಾಯ್ದೆಯನ್ನು ಗೋವಿನ ಮೇಲಿನ ಪ್ರೀತಿಗಿಂತ ರಾಜಕೀಯ ದುರ್ಲಾಭ ಪಡೆಯುವ ದುರುದ್ದೇಶದಿಂದ ಜಾರಿ ಮಾಡಲಾಗುತ್ತಿದೆ ಅಷ್ಟೆ, ಹಾಗಿದ್ದರೆ ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವೇ ಅಸ್ತಿತ್ವದಲ್ಲಿದ್ದರೂ ಗೋಹತ್ಯೆ ವಿರುದ್ಧ ಕಾಯ್ದೆಯನ್ನು ಏಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.